ಸನಾ: ಯೆಮೆನ್ ರಾಜಧಾನಿ ಸನಾದಲ್ಲಿರುವ ಹೌಥಿ ಬಂಡುಕೋರರ ನೆಲೆಗಳ ಅಮೆರಿಕ ನಡೆಸಿದ ಭೀಕರ ವಾಯುದಾಳಿಯಲ್ಲಿ (US Attack) 24 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಂಪು ಸಮುದ್ರದಲ್ಲಿ ನೌಕೆಗಳ ಮೇಲೆ ಇರಾನ್ ಬೆಂಬಲಿತ ಹೌಥಿ ಬಂಡುಕೋರರು ದಾಳಿ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ವಾಯುದಾಳಿ ನಡೆಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಇದರೊಂದಿಗೆ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಮತ್ತೊಂದು ಆಕ್ರಮಣಕಾರಿ ನಡೆ ಅನುಸರಿಸಿದಂತಾಗಿದೆ. ದಾಳಿಯ ಕುರಿತು ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ಹೌಥಿ ಉಗ್ರರೇ, ನಿಮ್ಮ ಸಮಯ ಮುಗಿದಿದೆ. ಇಂದಿನಿಂದಲೇ ನೀವು ಕೆಂಪು ಸಮುದ್ರದಲ್ಲಿ ದಾಳಿಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
“ನೀವು ಕೂಡಲೇ ದಾಳಿಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನೀವು ಹಿಂದೆಂದೂ ಕಂಡಿರದ ದಾಳಿಗಳನ್ನು ಕಾಣುತ್ತೀರಿ. ನಿಮ್ಮನ್ನು ಮುಗಿಸದೆ ನಾವು ಬಿಡುವುದಿಲ್ಲ. ಇನ್ನು ಇರಾನ್ ಕೂಡ ಹೌಥಿ ಉಗ್ರರಿಗೆ ಬೆಂಬಲ ನೀಡುವುದನ್ನು ಬಿಡಬೇಕು. ಮುಂದೆ ಆಗುವ ಎಲ್ಲ ಬೆಳವಣಿಗೆಗಳಿಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ” ಎಂದೂ ಟ್ರಂಪ್ ಎಚ್ಚರಿಸಿದ್ದಾರೆ.
ಹೌಥಿ ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 13 ನಾಗರಿಕರು ಕೂಡ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಭೀಕರ ದಾಳಿಯಲ್ಲಿ 23 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಂಪು ಸಮುದ್ರದಲ್ಲಿ ಅಮೆರಿಕದ ನೌಕೆಗಳ ಮೇಲೆ ಹೌಥಿ ಬಂಡುಕೋರರು ಇತ್ತೀಚೆಗೆ ದಾಳಿ ಮಾಡುತ್ತಿರುವ ಕಾರಣ ಅಮೆರಿಕ ಪ್ರತಿದಾಳಿ ನಡೆಸಿದೆ. ಅಮೆರಿಕ ದಾಳಿ ಬಗ್ಗೆ ಇದುವರೆಗೆ ಹೌಥಿ ಬಂಡುಕೋರರು, ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.