ಲಕ್ನೋ: ಉತ್ತರ ಪ್ರದೇಶದ ಬಸ್ತಿಯಲ್ಲಿ ಸೋಮವಾರ ವಿಚಿತ್ರ ಘಟನೆಯೊಂದು ನಡೆದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸ್ಥಳಕ್ಕೆ ತಡವಾಗಿ ಬಂದ ಇಬ್ಬರು ಹಿರಿಯ ಅಧಿಕಾರಿಗಳು ಅಕ್ಷರಶಃ ಓಡಬೇಕಾಗಿ ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ನಡೆದಿದ್ದೇನು?
ಉತ್ತರ ಪ್ರದೇಶದ ಜನಪ್ರಿಯ ಧಾರ್ಮಿಕ ವ್ಯಕ್ತಿ, ದಿವಂಗತ ನಂದಾ ಬಾಬಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ತಿಗೆ ಆಗಮಿಸಿದ್ದರು. ಸಿಎಂ ಹೆಲಿಕಾಪ್ಟರ್ ಇಳಿಯಲಿರುವ ಶ್ರೀಕೃಷ್ಣ ಪಾಂಡೆ ಇಂಟರ್ ಕಾಲೇಜು ಮೈದಾನದಲ್ಲಿ ಎಲ್ಲ ಅಧಿಕಾರಿಗಳು ಜಮಾಯಿಸಿದ್ದರು. ಆದರೆ, ಜಿಲ್ಲಾಧಿಕಾರಿ ಕೃತಿಕಾ ಜ್ಯೋತ್ಸ್ನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಭಿನಂದನ್ ಅವರು ಸ್ಥಳದಲ್ಲಿ ಇರಲಿಲ್ಲ.
ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆಯೇ, ಸೀರೆಯುಟ್ಟಿದ್ದ ಜಿಲ್ಲಾಧಿಕಾರಿ ಮತ್ತು ಎಸ್ಪಿ, ತಮ್ಮ ವಾಹನಗಳಿಂದ ಇಳಿದು, ಸ್ಥಳದತ್ತ ಓಟಕ್ಕಿಳಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರನ್ನು ಖ್ಯಾತ ಓಟಗಾರರಾದ ಪಿ.ಟಿ. ಉಷಾ ಮತ್ತು ಉಸೇನ್ ಬೋಲ್ಟ್‌ಗೆ ಹೋಲಿಸಿ ಹಾಸ್ಯ ಮಾಡಿದ್ದಾರೆ.
ಕಟ್ಟುನಿಟ್ಟಿನ ಶಿಸ್ತಿಗೆ ಹೆಸರಾದ ಯೋಗಿ ಆದಿತ್ಯನಾಥ್ ಅವರ ಕಾರ್ಯ ಸಂಸ್ಕೃತಿಗೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ಇಳಿದ ನಂತರ, ಯೋಗಿ ಆದಿತ್ಯನಾಥ್ ಅವರು ನಂದಾ ಬಾಬಾ ಅವರ ಆಶ್ರಮಕ್ಕೆ ತೆರಳಿ, ಶ್ರದ್ಧಾಂಜಲಿ ಸಲ್ಲಿಸಿದರು. ನಂದಾ ಬಾಬಾ ಅವರು ಗೋರಖ್‌ಪುರದ ಗೋರಖನಾಥ ದೇವಸ್ಥಾನದೊಂದಿಗೆ ದೀರ್ಘಕಾಲದ ಒಡನಾಟ ಹೊಂದಿದ್ದರು, ಯೋಗಿ ಆದಿತ್ಯನಾಥ್ ಅವರು ಈ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಶೋ ಆಫ್ ಮಾಡುತ್ತಿದೆ’ : ಬಿಹಾರ ಸೋಲಿನ ಬೆನ್ನಲ್ಲೇ ‘ಇಂಡಿಯಾ’ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟ!


















