ಗೋರಖ್‌ಪುರ/ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾನ್ಯವಾಗಿ ಶಿಸ್ತು ಮತ್ತು ಗಾಂಭೀರ್ಯಕ್ಕೆ ಹೆಸರಾದವರು. ಆದರೆ, ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಟ್ಟ ಬಾಲಕನೊಬ್ಬನ ಮುಗ್ಧ ಮಾತು ಕಠಿಣ ಶಿಸ್ತಿನ ಸಿಎಂ ಮೊಗದಲ್ಲೂ ನಗು ತರಿಸಿದೆ. ಸಿಎಂ ಪ್ರಶ್ನೆಗೆ ಬಾಲಕ ನೀಡಿದ ಅನಿರೀಕ್ಷಿತ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಗೋರಖ್‌ಪುರದ ಪ್ರಸಿದ್ಧ ಬಾಬಾ ಗೋರಖನಾಥ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಾರ್ಷಿಕ ‘ಖಿಚಡಿ ಉತ್ಸವ’ದಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ತೆರಳಿದ್ದರು. ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಜನಸಂದಣಿಯ ನಡುವೆ, ತಮ್ಮ ಪೋಷಕರೊಂದಿಗೆ ಬಂದಿದ್ದ ಪುಟ್ಟ ಬಾಲಕನೊಬ್ಬನನ್ನು ಕಂಡು ಸಿಎಂ ಮಾತನಾಡಿಸಲು ಮುಂದಾದರು.
ಆ ಮುಗ್ಧ ಸಂಭಾಷಣೆ:
ವೈರಲ್ ಆಗಿರುವ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಅವರು ಮಗುವಿನೆಡೆಗೆ ಬಾಗಿ, ನಗುತ್ತಾ “ನಿನಗೇನು ಬೇಕು?” ಎಂದು ಪ್ರೀತಿಯಿಂದ ಕೇಳುತ್ತಾರೆ. ಇದಕ್ಕೆ ಕ್ಷಣಮಾತ್ರವೂ ಯೋಚಿಸದ ಆ ಕಂದಮ್ಮ, ಸುತ್ತಲಿನ ಗಂಭೀರ ವಾತಾವರಣದ ಪರಿವೆಯೇ ಇಲ್ಲದೆ ಅತ್ಯಂತ ಮುಗ್ಧವಾಗಿ “ಚಿಪ್ಸ್” ಬೇಕು ಎಂದು ಉತ್ತರಿಸುತ್ತಾನೆ. ಬಾಲಕನ ಈ ನೇರ ಮತ್ತು ಪ್ರಾಮಾಣಿಕ ಉತ್ತರವನ್ನು ಕೇಳಿ ಸ್ವತಃ ಮುಖ್ಯಮಂತ್ರಿಗಳೇ ಅಚ್ಚರಿಗೊಂಡು ನಗುವ ದೃಶ್ಯ ವಿಡಿಯೋದಲ್ಲಿದೆ.
ನೆಟ್ಟಿಗರ ಮೆಚ್ಚುಗೆ:
ರಾಜಕೀಯ ನಾಯಕರು, ಭದ್ರತಾ ಸಿಬ್ಬಂದಿ ಮತ್ತು ಹಬ್ಬದ ಗದ್ದಲದ ನಡುವೆಯೂ, ಮಗು ತನ್ನ ಸಹಜ ಕುತೂಹಲ ಮತ್ತು ಆಸೆ ವ್ಯಕ್ತಪಡಿಸಿದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಎಂ ಪ್ರಶ್ನೆಗೆ ಮಗು ಯಾವುದೇ ಅಂಜಿಕೆಯಿಲ್ಲದೆ ತನಗೆ ಇಷ್ಟವಾದದ್ದನ್ನು ಕೇಳಿದ ಈ ‘ಕ್ಯೂಟ್’ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು | ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ.. ವಿಡಿಯೋ ವೈರಲ್



















