ಗದಗ: ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಯುಗಾದಿ ಹಬ್ಬದ ವೇಳೆ ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.
ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೂಗಳು ಮಳೆಯಿಂದ ತೀವ್ರ ಹಾನಿಗೊಳಗಾಗಿವೆ. ಈ ಭಾಗದಲ್ಲಿ ಬೆಳೆಯುವ ಚಂಡು ಹೂ, ಸೇವಂತಿಗೆ ಹಾಗೂ ಮಲ್ಲಿಗೆ ಹೂಗಳು ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಾಗಾಟವಾಗುತ್ತಿದ್ದು, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ರೈತರು ಈಗ ನಷ್ಟದಲ್ಲಿ ಮುಳುಗಿದ್ದಾರೆ.
ಮಳೆಯಿಂದ ತೇವಾಂಶ ಹೆಚ್ಚಾಗಿ ಹೂಗಳು ಕೊಳೆತು ಹೋಗಿದ್ದು, ರೈತರ ಆದಾಯ ಸಂಪೂರ್ಣ ಕುಸಿದಿದೆ. ಸಾಮಾನ್ಯವಾಗಿ ಕಿಲೋಗೆ ₹300ಕ್ಕೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂ ಬೆಲೆ ಈಗ 150ರೂ.ಗೆ ಇಳಿದಿದೆ. ಯುಗಾದಿ ಸಮಯದಲ್ಲಿ ₹500–₹700ರವರೆಗೆ ಏರಿಕೆಯಾಗುತ್ತಿದ್ದ ಬೆಲೆ ಈ ಬಾರಿ ಕಾಣಿಸದೇ ಹೋಗಿದೆ. ಚಂಡು ಹೂ ಬೆಲೆ ಕೂಡ 350ರಿಂದ 100ರೂ.ಗೆ ಕುಸಿದಿದೆ.
ಕಪ್ಪತ್ತಗುಡ್ಡ ಪಾದಭಾಗದ ಗ್ರಾಮಗಳಲ್ಲಿ ವರ್ಷಪೂರ್ತಿ ಹೂ ಬೆಳೆಸುತ್ತಿದ್ದ ರೈತರು, ಕಳೆದ ದೀಪಾವಳಿಯಲ್ಲಿ ಉತ್ತಮ ಲಾಭ ಪಡೆದಿದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದರು. ಪಕ್ಕದ ಜಿಲ್ಲೆಗಳಿಂದ ದೊಡ್ಡ ಆರ್ಡರ್‌ಗಳನ್ನೂ ಪಡೆದಿದ್ದರೂ, ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ಎಲ್ಲವೂ ಹಾಳಾಗಿದೆ.
ಇದರಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಯುಗಾದಿ ಹಬ್ಬದ ಹೂಗಳ ಬೇಡಿಕೆಗೂ ಪರಿಣಾಮ ಬಿದ್ದಿದ್ದು, ಗುಣಮಟ್ಟ ಕುಸಿತದಿಂದ ಬೆಲೆಗಳು ತಳಮಟ್ಟಕ್ಕೆ ಇಳಿದಿವೆ.
ಇದೇ ವೇಳೆ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ತಕ್ಷಣ ಸಮೀಕ್ಷೆ ನಡೆಸುವಂತೆ ವಿರೋಧ ಪಕ್ಷ ಬಿಜೆಪಿ ಆಗ್ರಹಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ‘X’ ಪೋಸ್ಟ್‌ನಲ್ಲಿ, 10ಕ್ಕೂ ಹೆಚ್ಚು ಜಿಲ್ಲೆಗಳ 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ, ಹಾವೇರಿ, ಗದಗ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ ಬೆಳೆಗಳು ಹಾನಿಗೊಳಗಾಗಿದ್ದು, ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು, ಹಲಸು ಹಾಗೂ ಕಲ್ಲಂಗಡಿ ಬೆಳೆಗಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಆಲಿಕಲ್ಲು ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ : ರಾಜ್ಯದ ಕೆಲವೆಡೆ ಮುಂದಿನ ಒಂದು ವಾರ ಮಳೆ ಸಾಧ್ಯತೆ : 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!



















