ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಬಗೆಹರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಆಂತರಿಕ ಕಲಹಗಳು ಬೀದಿ ಜಗಳವಾಗಿ ಪರಿವರ್ತನೆಯಾಗುತ್ತಿದೆ ಎಂಬಂತೆ ಕಾಣಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ನಡುವಿನ ಆಂತರಿಕ ಕಲಹ ಸದ್ಯ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಈ ತಿಂಗಳಾಂತ್ಯಕ್ಕೆ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳುತ್ತಿದ್ದು, ಅಲ್ಲಿಯಾದರೂ ಆಂತರಿಕ ಕಲಹಕ್ಕೆ ಮುಕ್ತಿ ಸಿಗಲಿದೆಯೇ ? ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯದಲ್ಲಿ ಯಾವಾಗ ʼಸಿಎಂ ಬದಲಾವಣೆʼ ವಿಚಾರ ಮುನ್ನೆಲೆಗೆ ಬಂತೋ, ಏಕಾಏಕಿ ಅಖಾಡಕ್ಕೆ ಧುಮುಕಿರುವ ಸಿಎಂ ಸಿದ್ಧರಾಮಯ್ಯ, ನಾನೇ 5 ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿರುತ್ತೇನೆ ಎಂದಿದ್ದು ಇಂದು ಇತಿಹಾಸವಾದರೆ, ಡಿಸಿಎಂ ಡಿಕೆಶಿ ಶತಾಯಗತಾಯ ಮುಖ್ಯಮಂತ್ರಿ ಸ್ಥಾನ ನನಗೆ ಸಿಗಲೇಬೇಕೆಂದು “ಪ್ರಯತ್ನ ವಿಫಲವಾದ್ರೂ ಪಾರ್ಥನೆ ವಿಫಲವಾಗುವುದಿಲ್ಲ” ಎಂದಿದ್ದು ಸಿಎಂ, ಡಿಸಿಎಂ ನಡುವಿನ ವಾಕ್ಸಮರ ಮುಂದುವರಿಕೆಗೆ ಕಾರಣವಾಗಿದೆ.
ಇವೆಲ್ಲಾ ಬೆಳವಣಿಗೆಗಳನ್ನು ತೆರೆಮರೆಯಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್ ನಾಯಕರುಗಳು, ರಾಜ್ಯದ ಸಿಎಂ ಹಾಗೂ ಡಿಸಿಎಂಗೆ ತಿಂಗಳಾಂತ್ಯಕ್ಕೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಈಗ ಅಸಲಿ ವಿಚಾರ ಏನು ಅಂದರೆ, ಈ ಹಿಂದೆಯೇ 50:50 ಅನುಪಾತದಲ್ಲಿ ಸಿಎಂ ಸ್ಥಾನ ಎಂಬ ಮಾತುಕತೆ ಆಗಿದೆ ಎಂದು ಹೇಳಲಾಗುತ್ತಿದೆ, ಈಗ ಅಧಿಕಾರ ಹಂಚಿಕೆಯ ಒಪ್ಪಂದಕ್ಕೆ ಸಿಎಂ ಸಿದ್ಧರಾಮಯ್ಯ ತಯಾರಿಲ್ಲ, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಪದವಿಗಾಗಿ ಹಠ ಹಿಡಿದಿದ್ದಾರೆ.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು, ಆಡಳಿತ ಅವಧಿಯ ದಾಖಲೆಯನ್ನು ಸಿದ್ಧರಾಮಯ್ಯ ಮುರಿಯಲೇಬೇಕೆಂದು ಪಣತೊಟ್ಟಿದ್ದಾರೆ. 8 ವರ್ಷ 3 ತಿಂಗಳ ಅವರು ಸಿಎಂ ಸ್ಥಾನದಲ್ಲಿ ಇರಲೇಬೇಕೆಂದು ಹೈಕಮಾಂಡ್ ನಾಯಕರ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ. ಯಾರು ಯಾರ ದಾಖಲೆ ಮುರಿಯಬೇಕೋ ಇಲ್ವೋ, ನಾನಂತೂ ಮುಖ್ಯಮಂತ್ರಿ ಆಗಲೇಬೇಕೆಂದು ಡಿಕೆಶಿ ಬ್ಯಾಟಿಂಗ್ ಆರಂಭಿಸಿದ್ದು, ಸಿಎಂ ಬದಲಾವಣೆ ನಿಶ್ಚಿತ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ.
ಒಟ್ಟಾರೆ, ಈ ತಿಂಗಳಾಂತ್ಯಕ್ಕೆ ಕಾಂಗ್ರೆಸ್ ಆಂತರಿಕ ಕಲಹ ಇನ್ನೊಂದು ಮೆಟ್ಟಿಲು ಮೇಲೆರಲಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ದಿನಗಳು ಹತ್ತಿರ ಬರುವ ಲಕ್ಷಣಗಳು ಗೋಚರವಾಗುತ್ತಿದೆ.
ಒಟ್ಟಿನಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಸಿಎಂ ಡಿಸಿಎಂ ನಡುವಿನ ಈ ಆಂತರಿಕ ಗುದ್ದಾಟ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಹೈಕಮಾಂಡ್ ಯಾವಾಗ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಕುತೂಹಲ ಮೂಡಿದೆ.



















