ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಜಾತ್ರೆಯ ವೇಳೆ ಕೇಂದ್ರ ಸಚಿವೆಯ ಪುತ್ರಿಗೇ ಪುಂಡರು ಕಿರುಕುಳ ನೀಡಿದ ಪ್ರಕರಣ ಸುದ್ದಿಯಾಗಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವೆ ರೇಖಾ ಖಾಡ್ಸೆ ಅವರ ಪುತ್ರಿ ಹಾಗೂ ಅವರ ಗೆಳತಿಯರಿಗೆ ಕಿರುಕುಳ ನೀಡಲಾಗಿದ್ದು, ಮಹಿಳಾ ಸುರಕ್ಷತೆ ಕುರಿತು ಸಚಿವೆಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಲಗಾಂವ್ ಜಿಲ್ಲೆಯ ಕೋಥಲಿ ಗ್ರಾಮದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ನಡೆದ ಜಾತ್ರೆಯ ವೇಳೆ ರಕ್ಷಾ ಖಾಡ್ಸೆ ಅವರ ಪುತ್ರಿ ಹಾಗೂ ಅವರ ಗೆಳತಿಯರಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಕೇಂದ್ರ ಸಚಿವೆಯು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
“ಕೋಥಲಿ ಗ್ರಾಮದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಜಾತ್ರೆ ಆಯೋಜಿಸಲಾಗಿತ್ತು. ನನ್ನ ಮಗಳು ಕಳೆದ ಶುಕ್ರವಾರ ಗೆಳತಿಯರೊಂದಿಗೆ ಜಾತ್ರೆಗೆ ತೆರಳಿದ್ದಳು. ಇದೇ ವೇಳೆ ಕೆಲ ಯುವಕರು ನನ್ನ ಮಗಳು ಹಾಗೂ ಆಕೆಯ ಗೆಳತಿಯರಿಗೆ ಕಿರುಕುಳ ನೀಡಿದ್ದಾರೆ. ಅದಕ್ಕಾಗಿ ನಾನು ಇಲ್ಲಿಗೆ ದೂರು ನೀಡಲು ಬಂದಿದ್ದೇನೆ. ಒಬ್ಬ ಸಂಸದೆ, ಸಚಿವೆ ಎಂಬುದಕ್ಕಿಂತ, ಒಬ್ಬ ತಾಯಾಗಿ ನಾನಿಲ್ಲಿ ನ್ಯಾಯ ಕೇಳಲು ಬಂದಿದ್ದೇನೆ” ಎಂದು ಪೊಲೀಸ್ ಠಾಣೆ ಎದುರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಘಟನೆ ಬಗ್ಗೆ ಪೊಲೀಸರ ಜತೆ ಸಮಗ್ರವಾಗಿ ಚರ್ಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಘಟನೆ ನಡೆದಿರುವುದು ಭಾರಿ ದುಃಖ, ಬೇಸರ ತಂದಿದೆ. ಕೇಂದ್ರ ಸಚಿವೆಯ ಪುತ್ರಿಗೇ ಹೀಗಾದರೆ, ಸಾಮಾನ್ಯ ಜನರ ಪಾಡೇನು” ಎಂದು ಪ್ರಶ್ನಿಸಿದ್ದಾರೆ. ಇದಾದ ಬಳಿಕ ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕ್ಯಾಪ್ಶನ್…
ಪುತ್ರಿಯೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರಕ್ಷಾ ಖಾಡ್ಸೆ.