ಮಂಡ್ಯ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ನವರ ಉಪಟಳ ಜಾಸ್ತಿಯಾಗಿದ್ದು, ಅವರಲ್ಲಿ ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಸಂತೆಕಸಲಗೆರೆ ಗ್ರಾಮದಲ್ಲಿ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮಗೆ ಯಾರೇ ಮೈಕ್ರೋ ಫೈನಾನ್ಸ್ ನವರು ಬಂದು ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ತಕ್ಷಣ ನನಗೆ ಕರೆ ಮಾಡಿ, ನಾನಿದ್ದೇನೆ. ನಿಮ್ಮ ಜೀವ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.
ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ಅಸಲು ತೀರುವುದೇ ಇಲ್ಲ ಎಂದ ಸಚಿವರು, ಹಳ್ಳಿಗಳ ಯುವಕರು ಆನ್ಲೈನ್ ಗೇಮ್ ಗಳ ಚಟಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಸಾಲಕ್ಕೆ ಅವರು ಸಿಕ್ಕಿಕೊಂಡು ಕೊನೆಗೆ ಸಾವಿಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಧಾರುಣ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ನಾನು 2018ರಲ್ಲಿ ಸಿಎಂ ಆಗುವ ಮೊದಲು ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಸಾವುಗಳು ನನಗೆ ತೀವ್ರ ಆಘಾತ ಮಾಡುತ್ತಿದ್ದವು. ನಾನು ಮಂಡ್ಯಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದೆ. ಆಮೇಲೆ ನಾನು 25,000 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನಾನೇ ಸ್ವತಃ ರಾಷ್ಟ್ರಪತಿಗಳ ಬಳಿಗೆ ಹೋಗಿ ಕಾಯ್ದೆಗೆ ಅಂಕಿತ ಹಾಕಿಸಿಕೊಂಡು ಬಂದೆ ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಉಪಟಳ ಕೆಲವು ತಿಂಗಳ ಹಿಂದೆ ಚಾಮರಾಜನಗರದಲ್ಲಿ ಆರಂಭವಾಯಿತು. ರಾಜ್ಯದ ಉದ್ದಗಲಕ್ಕೂ ಸರಣಿ ಸಾವುಗಳು ಸಂಭವಿಸುತ್ತಿವೆ. ಆದರೆ, ನಮ್ಮ ರಾಜ್ಯದ ಕಾನೂನು ಸಚಿವರು ಇನ್ನೂ ಸಮಗ್ರವಾಗಿ ಚಿಂತನೆ ಮಾಡುತ್ತಿದ್ದಾರೆ. ಬೇರೆ ಯಾವುದೇ ವಿಷಯಕ್ಕೆ ವಿದ್ಯುತ್ ವೇಗದಲ್ಲಿ ನಿರ್ಧಾರ ಕೈಗೊಳ್ಳುವ ಸರ್ಕಾರ ಮೈಕ್ರೋ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಲು ಮೀನಮೇಷ ಎಣಿಸುತ್ತಿದೆ ಎಂಬುವುದು ತಿಳಿಯುತ್ತಿಲ್ಲ. ಇದು ಅನುಮಾನಕ್ಕೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳಿಯ ಜನರ ಬದುಕು ಅಯೋಮಯವಾಗಿದೆ. ಹಳೆಯ ಕಾಲದ ಹಳ್ಳಿಗಳು ಮರೆಯಾಗುತ್ತಿವೆ. ಮಾನವೀಯ ಮೌಲ್ಯಗಳು ಅಳಿದು ಹೋಗುತ್ತಿವೆ. ಭಾರತ ಇಂದು ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದರೆ, ಸಮಾಜ ಕಲುಷಿತವಾಗುತ್ತಿದೆ. ಯುವ ಪೀಳಿಗೆ ದಾರಿ ತಪ್ಪುತ್ತಿದೆ. ನಾವು ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು ಹಾಗೂ ನಮ್ಮ ಸಮಾಜ ಸಂತೋಷವಾಗಿರಬೇಕು ಎಂದು ಸಚಿವರು ಆಶಿಸಿದರು.
ಹಿಂದೆ ಸಮಾಜಲ್ಲಿ ಸೇವಾ ಮನೋಭಾವ, ನಿಸ್ವಾರ್ಥತೆ ಇತ್ತು. ಸಮಸ್ಯೆ ಬಂದರೆ ಗ್ರಾಮಸ್ಥರೇ ಕೂತು ಬಗೆಹರಿಸಿಕೊಳ್ಳುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಸಣ್ಣ ತುಂಡು ಭೂಮಿಗಾಗಿ ಅಣ್ಣ ತಮ್ಮಂದಿರು ಜಗಳ ಮಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಅಂತ ಅಲೆಯುತ್ತಿದ್ದಾರೆ. ನೆಮ್ಮದಿಯ ಬದುಕು ದೂರವಾಗಿದೆ. ಹಳ್ಳಿ ಅಭಿವೃದ್ಧಿಯಾಗಬೇಕು. ಆದರೆ, ನಮ್ಮ ಮೌಲ್ಯಗಳನ್ನು ಬಿಟ್ಟು ಕೊಡಬಾರದು. ರಾಜಕಾರಣಕ್ಕೆ ಪರಸ್ಪರ ಜಗಳ ಬೇಡ. ನಿಮ್ಮ ಮತ ನಿಮ್ಮ ಇಷ್ಟ. ರಾಜಕಾರಣ ನಿತ್ಯದ ಕೆಲಸವಾಗಬಾರದು ಎಂದು ಹೇಳಿದ್ದಾರೆ. ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ತಮ್ಮಣ್ಣ, ಉಪಾಧ್ಯಕ್ಷ ಶಿವಣ್ಣ ಸೇರಿದಂತೆ ಹಲವರು ಇದ್ದರು.