ನವದೆಹಲಿ: ನಾಗಮಂಗಲ ಕೋಮುಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ರಾಜಕೀಯ ಮಾಡಬಾರದು ಎಂಬ ಜಿ. ಪರಮೇಶ್ವರ್ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ಎಂದಿಗೂ ರಾಜಕಾರಣ ಮಾಡಿಲ್ಲ. ಆದರೆ, ಕಾಂಗ್ರೆಸ್ ನವರೇ ಸರ್ವ ಜನಾಂಗದ ಶಾಂತಿಯ ತೋಟದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಮಂಗಲದ ಗಲಭೆ ವಿಚಾರವಾಗಿ ಶಾಂತಿ ಕಾಡಾಡುವಂತೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದೆ. ಗೃಹ ಸಚಿವ ಪರಮೇಶ್ವರ್ ಇಂತಹೊ ದೊಡ್ಡ ಘಟನೆಯನ್ನು ಸಣ್ಣ ಘಟನೆ ಎಂದು ಹೇಳುತ್ತಿದ್ದಾರೆ. ಇದು ಸಣ್ಣ ಘಟನೆಯೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಬೆಂಕಿ ಹಚ್ಚುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ಬೆಂಕಿ ಆರಿಸುವ ಕೆಲಸ ಮಾಡಿದ್ದೇನೆ. ನಾಗಮಂಗಲ ಪಟ್ಟಣದಲ್ಲಿ ಪೊಲೀಸ್ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಎಸೆಯುವ ಕೆಲಸ ಆಕಸ್ಮಿಕವೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ಸಮುದಾಯ ಓಲೈಕೆ ಮಾಡುತ್ತಿಲ್ಲ. ತಲ್ವಾರ್ ಹಿಡಿದು ಓಡಾಡುತ್ತಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದನ್ನು ಗಮನಿಸಿದರೆ ನಿಮ್ಮ ಆಡಳಿತ ವ್ಯವಸ್ಥೆ ತಿಳಿಯುತ್ತದೆ. ನಾನು ಸಿಎಂ ಆಗಿದ್ದಾಗ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿಲ್ಲ. ಪ್ರಮುಖ ಆರೋಪಿ ಈಗಾಗಲೇ ತಪ್ಪಿಸಿಕೊಂಡಿದ್ದಾನೆ. ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.