ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಹತ್ಯಾ ದಿವಸ್ (Samvidhaan Hatya Diwas) ಎಂದು ಪ್ರತಿ ವರ್ಷ ಜೂನ್ 25ನ್ನು ಘೋಷಿಸಿದ್ದಾರೆ.
ಈ ಮೂಲಕ ತುರ್ತು ಪರಿಸ್ಥಿತಿಯ (Emergency Day) ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮಿತ್ ಶಾ, ಸಂವಿಧಾನ ಹತ್ಯಾ ದಿವಸ್ ಆಚರಣೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಸುತ್ತೋಲೆ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ʻಸಂವಿಧಾನ ಹತ್ಯಾ ದಿವಸ್ʼ ಆಚರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 1975ರ ಜೂನ್ 25 ರಂದು, ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಸರ್ವಾಧಿಕಾರಿ ಮನಸ್ಥಿತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಸುಕಿದರು. ಯಾವ ತಪ್ಪಿಲ್ಲದೇ ಲಕ್ಷಾಂತರ ಜನರನ್ನು ಕಂಬಿಯ ಹಿಂದೆ ಸರಿಸಲಾಯಿತು. ಮಾಧ್ಯಮಗಳ ಧ್ವನಿ ಮೌನಗೊಳಿಸಲಾಯಿತು. ಹೀಗಾಗಿ ಪ್ರತಿ ವರ್ಷ ಜೂನ್ 25ರ ದಿನವನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸಲು ನಿರ್ಧರಿಸಿದೆ ಎಂದು ಘೋಷಣೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಪರಿಸ್ಥಿತಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ತುರ್ತು ಪರಿಸ್ಥಿತಿ ಹೇರಲು ಕಾರಣವಾದ ಮನಸ್ಥಿತಿಯು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿದೆ. ತುರ್ತು ಪರಿಸ್ಥಿತಿ ಹೇರಿದವರಿಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ. ಹೀಗಾಗಿಯೇ ಜನರು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ತುರ್ತು ಪರಿಸ್ಥಿತಿʼಯು (Emergency 1975) ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಪ್ರಧಾನಿ ಇಂದಿರಾಗಾಂಧಿ (Indira Gandhi) ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಕಳೆದ ಜೂನ್ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಹೀಗಾಗಿ ಸರ್ಕಾರ ಸಂವಿಧಾನ ಹತ್ಯಾ ದಿವಸ್ ಆಚರಣೆಗೆ ಮುಂದಾಗಿದೆ.