ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರು ನಿವೃತ್ತರಾದ ಬಳಿಕ ಪಿಂಚಣಿ ಖಾತ್ರಿ ನೀಡುವ ಏಕೀಕೃತ ಪಿಂಚಣಿ ಯೋಜನೆಯು (Unified Pension Scheme) ಏಪ್ರಿಲ್ 1ರಿಂದ ಜಾರಿಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆ ಜಾರಿ ಕುರಿತು ಮಾರ್ಗಸೂಚಿಗಳನ್ನು ಕೂಡ ಹೊರಡಿಸಿದೆ. ಅಲ್ಲದೆ, ಕೇಂದ್ರ ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಜೂನ್ 30ರವರೆಗೆ ಅವಕಾಶವನ್ನೂ ನೀಡಲಾಗಿದೆ. ಇನ್ನು ಯೋಜನೆ ಜಾರಿಯಾದ ಬಳಿಕ ಯಾರೆಲ್ಲ ಶೇ.50ರಷ್ಟು ಪಿಂಚಣಿ ಪಡೆಯಲು ಅರ್ಹರು? ಏನೆಲ್ಲ ನಿಯಮಗಳು ಅನ್ವಯವಾಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಶೇ.50ರಷ್ಟು ಪಿಂಚಣಿ ಸಿಗೋದು ಯಾರಿಗೆ?
ನ್ಯಾಷನಲ್ ಪೆನ್ಶನ್ ಸ್ಕೀಮ್ ಆಯ್ಕೆ ಮಾಡಿಕೊಂಡ ಕೇಂದ್ರ ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಇನ್ನು. ನೌಕರರು ನಿವೃತ್ತಿ ಹೊಂದಿದ ಬಳಿಕ ಅವರ ಸೇವಾವಧಿಯ ಕೊನೆಯ ಒಂದು ವರ್ಷದ ಸರಾಸರಿ ಬೇಸಿಕ್ ಸಂಬಳದ ಶೇ.50ರಷ್ಟು ಮೊತ್ತವನ್ನು ಮಾಸಿಕ ಪಿಂಚಣಿಯಾಗಿ ನೀಡಲಾಗುತ್ತದೆ.
ನಿವೃತ್ತ ನೌಕರರು ಮಾಸಿಕ ಶೇ.50ರಷ್ಟು ಪಿಂಚಣಿ ಪಡೆಯಬೇಕು ಎಂದರೆ ಕೆಲ ನಿಯಮಗಳು ಅನ್ವಯವಾಗುತ್ತವೆ. ಸುಮಾರು 25 ವರ್ಷಗಳವರೆಗೆ ಒಬ್ಬ ನೌಕರನು ಸರ್ಕಾರದ ಸೇವೆ ಮಾಡಿದ್ದರೆ ಮಾತ್ರ ಶೇ.50ರಷ್ಟು ಪಿಂಚಣಿ ದೊರೆಯುತ್ತದೆ. ಇನ್ನು, ಸತತವಾಗಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸುವ ನೌಕರರಿಗೆ ಮಾಸಿಕ 10 ಸಾವಿರ ರೂ.ವರೆಗೆ ಪಿಂಚಣಿ ದೊರೆಯುತ್ತದೆ.
ಹಳೆಯ ಪಿಂಚಣಿ ಯೋಜನೆ ಹಾಗೂ ಹೊಸ ಪಿಂಚಣಿ ಯೋಜನೆಯ ಬದಲಾಗಿ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆಯನ್ನು ರೂಪಿಸಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ನೌಕರರು ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯ ಆಯ್ಕೆಯನ್ನು ಆಯಾ ನೌಕರರಿಗೆ ಬಿಟ್ಟಿದೆ.