ಕಾರ್ಕಳ: ಸೆ.06(ಶನಿವಾರ)ರಂದು ರಾತ್ರಿ ಸುಮಾರು 9: 30ರ ವೇಳೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ಪತ್ನಿಯೇ ತನ್ನ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿತ್ತು.
ಸುಮಾರು 9:30 ರ ವೇಳೆಗೆ ಪತ್ನಿ ಮಾಲತಿ ಪತಿ ಶೇಖರ್ ಮೂಲ್ಯ (60) ಎಂಬವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಮೊದಲಿಗೆ ಯಾರೋ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ಸ್ವತಃ ಪತ್ನಿಗೆ ದೂರು ನೀಡಿದ್ದಳು. ದೂರಿನ ಅನ್ವಯ ಸೂಕ್ತ ವಿಚಾರಣೆಯ ಬಳಿಕ ಪತ್ನಿಯೇ ಕತ್ತಿಯಿಂದ ಹಲ್ಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಾತ್ರವಲ್ಲದೇ, ವಿಚಾರಣೆ ವೇಳೆ ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣದಿಂದ ತಾನೇ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಮಾಲತಿ ತಪ್ಪೊಪ್ಪಿಕೊಂಡಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಮಾಲತಿ ಮೂಲ್ಯ ಅವರು ಮಗಳಿಗೆ ಕರೆ ಮಾಡಿ ‘ನಿನ್ನ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆ ನಡೆಸಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರಲ್ಲದೆ ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮಾಡಿದ್ದಳು. ಬಳಿಕ ಗಾಯಾಳು ಶೇಖರ್ ಮೂಲ್ಯ ಅವರನ್ನು ಮಂಗಳೂರಿನ ವೆನ್ಸಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಮಾಲತಿ ಮೂಲ್ಯ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.