ಉಡುಪಿ: ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಬ್ಲಡ್ ಟೆಸ್ಟ್ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದೆ. ಆದರೆ ಆರೋಪಿಗಳಿಬ್ಬರ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.
ಈ ಕುರಿತು ಉಡುಪಿ ಎಸ್ಪಿ ಡಾ. ಅರುಣ್ ಕೆ. ಹೇಳಿದ್ದಾರೆ. ಪ್ರಕರಣದ 1ನೇ ಆರೋಪಿ ಅಲ್ತಾಫ್ ಹಾಗೂ ಬಿಯರ್ ಬಾಟಲ್ ತಂದುಕೊಟ್ಟ 2ನೇ ಆರೋಪಿ ರಿಚರ್ಡ್ ಬ್ಲಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಆರೋಪಿ ಅಲ್ತಾಫ್ ವಿಚಾರಣೆ ಸಂದರ್ಭದಲ್ಲಿ ಕಾರಿನಲ್ಲಿದ್ದ ಒಂದು ಪುಡಿ ತೋರಿಸಿದ್ದ. ಸಂತ್ರಸ್ತ ಯುವತಿಗೆ ಇದನ್ನೇ ನೀಡಿದ್ದಾಗಿ ಹೇಳಿದ್ದ. ಆ ಪೌಡರ್ ನ್ನು ನಾವು ಎಫ್ ಎಸ್ ಎಲ್ ಗೆ ಕಳುಹಿಸಿದ್ದೇವೆ. ಯಾವ ಡ್ರಗ್ಸ್ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಡ್ರಗ್ ನ್ನು ಎಲ್ಲಿಂದ ಪಡೆದಿದ್ದಾರೆ ಮತ್ತು ಎಲ್ಲಿಂದ ಬಂದಿದೆ ಎಂಬ ಕುರಿತು ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಜಡ್ಜ್ ಮುಂದೆ ಹೇಳಿಕೆ ನೀಡಲಿದ್ದು, ಈ ಪ್ರಕ್ರಿಯೆ ನಡೆಯಲಿದೆ. ಈ ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ಮುಗಿಸಲಾಗುವುದು ಎಂದು ಹೇಳಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ ಹಿಂದು ಯುವತಿಯನ್ನು (Hindu girl) ಕರೆದೊಯ್ದ ಮುಸ್ಲಿಂ ಯುವಕ, ಬಿಯರ್ ನಲ್ಲಿ ಮತ್ತು ಬರಿಸುವ ಔಷಧ ಸೇರಿಸಿ ಕುಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ ಘಟನೆ ಕಾರ್ಕಳದಲ್ಲಿ ನಡೆದಿತ್ತು. ಇದಕ್ಕೆ ಇಬ್ಬರು ಸ್ನೇಹಿತರು ಸಹಕರಿಸಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಉದ್ವಿಗ್ನತೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ತಾಫ್ ಹಾಗೂ ಆತನಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರು ಆರೋಪಿಗಳ ಪೈಕಿ ಸುಬೇರ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.