ಉಡುಪಿ : ಇದೇ ಬರುವ ನವೆಂಬರ್ 28ಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಮಠದ ಶ್ರೀಪಾದರು, ಜಿಲ್ಲಾಡಳಿತ ಹಾಗೂ ಶಾಸಕರನ್ನು ಒಳಗೊಂಡಂತೆ ಪೂರ್ವಭಾವಿ ಸಭೆ ಕರೆದು, ಸಕಲ ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ.

ಈ ಹಿಂದೆ ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿ ಉಡುಪಿ ಶ್ರೀ ಕೃಷ್ಣನ ದರುಶನ ಪಡೆದಿದ್ದರು. ನಂತರ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದರು ಕೂಡ ಸುರಕ್ಷತೆಯ ದೃಷ್ಟಿಯಿಂದ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ಇದೆ ನೆವೆಂಬರ್ 28ಕ್ಕೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮೋದಿ ಭೇಟಿ ನೀಡಲಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸಂಬಂಧ ಉಡುಪಿ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಸಕಲ ತಯಾರಿಯಲ್ಲಿ ನಿರತವಾಗಿದೆ.
ಶ್ರೀಕೃಷ್ಣ ಕಾರಿಡಾರ್ ವಿಚಾರವಾಗಿ ಪ್ರಧಾನಿಯಲ್ಲಿ ಮನವಿ :
ಮಧ್ಯಾಹ್ನ 12 ಗಂಟೆಗೆ ಶ್ರೀ ಕೃಷ್ಣ ಮಠಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ದೇವರ ದರ್ಶನವನ್ನು ಪಡೆಯಲಿದ್ದಾರೆ. ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಗೀತಾ ಜಯಂತಿಯ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಲಿರುವ “ಲಕ್ಷ ಕಂಠ ಗೀತೋತ್ಸವ” ಸಮಾರಂಭದಲ್ಲಿ ನರೇಂದ್ರ ಮೋದಿ ಭಾಗಿವಹಿಸಲಿದ್ದಾರೆ.
ಇದೇ ಸಮಯದಲ್ಲಿ ಶ್ರೀಕೃಷ್ಣ ಕಾರಿಡಾರ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯಲ್ಲಿ ಮನವಿ ಸಲ್ಲಿಸುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಪರಿಸರವನ್ನು ಅಭಿವೃದ್ಧಿಪಡಿಸಿ, ಬಂದಂತಹ ಭಕ್ತಾದಿಗಳಿಗೆ ಉತ್ತಮ ಅನುಭವವನ್ನು ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಇದನ್ನೂ ಓದಿ : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 5 ಹುದ್ದೆಗಳ ನೇಮಕ : 98 ಸಾವಿರ ರೂ. ಸಂಬಳ



















