ಉಡುಪಿ : ಆಯತಪ್ಪಿ ಬಾವಿಗೆ ಬಿದ್ದಿದ್ದ ವೃದ್ಧರೊಬ್ಬರನ್ನು ಗ್ಯಾಸ್ ಸಿಲಿಂಡರ್ ಓಟಿಪಿ ರಕ್ಷಣೆ ಮಾಡಿದ್ದು, ಆ ಮೂಲಕ ಅಪರೂಪದ ಘಟನೆಗೆ ಉಡುಪಿ ಜಿಲ್ಲೆ ಸಾಕ್ಷಿಯಾಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್ ಆಚಾರ್ಯ(62) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ಅಲ್ಲಿಂದ ಬಾವಿಗೆ ಹಾಕಿದ್ದ ಪಂಪ್ನಲ್ಲಿ ಕಸ ತುಂಬಿದ್ದರಿಂದ ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ಹೋಗಿದ್ದರು. ಈ ವೇಳೆ ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿ ಆಯತಪ್ಪಿ ಸುಮಾರು 15 ರಿಂದ 20 ಅಡಿ ಆಳದ ಬಾವಿಗೆ ಶೀನಿವಾಸ್ ಬಿದ್ದಿದ್ದರು.

ಒಂಟಿ ಮನೆ ಹಾಗೂ ಏಕಾಂಗಿಯಾಗಿ ಶ್ರೀನಿವಾಸ್ ಆಚಾರ್ಯ ವಾಸಿಸುತ್ತಿದ್ದ ಹಿನ್ನೆಲೆ ಬಾವಿಗೆ ಬಿದ್ದ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬಾವಿ ಒಳಗಿಂದ ಎಷ್ಟೇ ಬೊಬ್ಬೆ ಹೊಡೆದರು ಯಾರ ಅರಿವಿಗೂ ಬಂದಿಲ್ಲ. ಇನ್ನೇನು ಮಾಡುವುದು ಎಂದು ಬಾವಿಯಲ್ಲಿದ್ದ ಪೈಪ್ವೊಂದನ್ನು ಹಿಡಿದು ಶ್ರೀನಿವಾಸ್ ಕುಳಿತುಕೊಂಡಿದ್ದರು. ಶ್ರೀನಿವಾಸ್ ಆಚಾರ್ಯ ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಬಾವಿಯಲ್ಲಿ ಇದ್ದರು ಎನ್ನಲಾಗಿದೆ.
ಗ್ಯಾಸ್ ಸಿಲಿಂಡರ್ ಓಟಿಪಿ ಉಳಿತು ಜೀವ
ಶ್ರೀನಿವಾಸ್ ಆಚಾರ್ಯರ ಜೀವ ಉಳಿಸಿದ್ದು ಗ್ಯಾಸ್ ಸಿಲಿಂಡರ್ ಓಟಿಪಿ. ಹೌದು.. ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದಾರೆ. ಗ್ಯಾಸ್ ಬುಕ್ ಮಾಡಿ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಆ ಮೂಲಕ ಹೊಸ ಸಿಲಿಂಡರ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ಶ್ರೀನಿವಾಸ್ ನಡುವೆ ಬಾವಿಗೆ ಬಿದ್ದಿದ್ದರು.

ಇನ್ನು, ಹೊಸ ಸಿಲಿಂಡರ್ ಪಡೆಯಲು ಓಟಿಪಿ ಬೇಕಾಗಿತ್ತು. ಗ್ಯಾಸ್ ಸರಬರಾಜಿಗೆ ಬಂದಾಗ ಶ್ರೀನಿವಾಸ್ ಆಚಾರ್ಯ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಸಿಲಿಂಡರ್ ನೀಡಿದ್ದ ಗಣೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಗಣೇಶ್ ತಮ್ಮ ಬಾಡಿಗೆ ಮನೆಯಲ್ಲಿ ಇರುವ ವ್ಯಕ್ತಿಗಳ ಮೂಲಕ ಶ್ರೀನಿವಾಸ್ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತೋಟದ ಮನೆಯ ಮೂಲೆಯಲ್ಲಿರುವ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಪತ್ತೆಯಾಗಿದೆ.
ತಕ್ಷಣವೇ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಶ್ರೀನಿವಾಸ್ ಆಚಾರ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.
ಇದನ್ನೂ ಓದಿ : “ನನಗ್ಯಾರೂ ಇಲ್ಲ, ಏನ್ಮಾಡಲಿ” : ಬದುಕಿರುವಾಗಲೇ ತನ್ನ ಸಾವಿನ ಔತಣಕೂಟ ಏರ್ಪಡಿಸಿದ ವೃದ್ಧ!



















