ಉಡುಪಿ : ಕರಾವಳಿ, ಮಲೆನಾಡು ಭಾಗದ ಪ್ರಮುಖ ಕಲೆಗಳಲ್ಲಿ ಒಂದಾದ ಯಕ್ಷಗಾನ, ತಾಳಮದ್ದಲೆ. ಇದರ ಕಲಾವಿದರು ಹಾಗೂ ಅರ್ಥಧಾರಿಗಳ ಕುರಿತಂತೆ ಅವಹೇಳನ, ಲೇವಡಿ, ಅಪಮಾನದ ಮಾತುಗಳನ್ನು ಸತತವಾಗಿ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿರುವ ಹಿರಿಯ ಪತ್ರಕರ್ತ, ಸಂಪಾದಕ ವಿಶ್ವೇಶ್ವರ ಭಟ್ಟರ ನಡೆಗೆ ತಾಳಮದ್ದಲೆ ಕಲಾವಿದರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹೀಗಾಗಿ ಭಟ್ಟರು ತಕ್ಷಣ ಈ ಬಗ್ಗೆ ಕ್ಷಮಾಪಣೆ ಕೇಳಿ, ವಿವಾದಕ್ಕೆ ಇತಿಶ್ರೀ ಹಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ವಿಶ್ವೇಶ್ವರ ಭಟ್ಟರು ಕಳೆದ ಕೆಲ ಸಮಯದಿಂದ ‘ಭಟ್ಟರ ಸ್ಕಾಚ್’ ಎನ್ನುವ ಪ್ರಶೋತ್ತರ ಅಂಕಣದಲ್ಲಿ ತಾಳಮದ್ದಲೆ ಕಲಾವಿದರ ಕುರಿತಂತೆ ನಡೆಸುತ್ತಿರುವ ಅವಹೇಳನದ ಅಭಿಯಾನವನ್ನು ಖಂಡಿಸಿ ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಘನ ವಿದ್ವಾಂಸ ಡಾ.ಎಂ ಪ್ರಭಾಕರ ಜೋಷಿ ನೇತೃತ್ವದಲ್ಲಿ 15 ಮಂದಿ ಕಲಾವಿದರು ಇಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಳಮದ್ದಲೆ ಕಲಾವಿದರ ಬೇಡಿಕೆಗಳು:
- ತಮ್ಮ ಅಬದ್ಧ ಬರಹಕ್ಕೆ ಹಾಗೂ ಅರ್ಥಧಾರಿಗಳ ಕುರಿತಾದ ಮಾನಹಾನಿಕರ ಹೇಳಿಕೆಗಳಿಗೆ ವಿಶ್ವೇಶ್ವರ ಭಟ್ಟರು ಸಾರ್ವಜನಿಕವಾಗಿ ತಮ್ಮ ಪತ್ರಿಕೆಯಲ್ಲೇ ಅರ್ಥಧಾರಿಗಳ, ಕಲಾಭಿಮಾನಿಗಳ ಕ್ಷಮೆ ಕೋರಬೇಕು.
- ಅವರ ಅಂಕಣದಲ್ಲಿ ಹಾಸ್ಯ ಬರಹದ ಹೆಸರಿನಲ್ಲಿ ತಾಳಮದ್ದಲೆ ಅರ್ಥಧಾರಿಗಳ ತೇಜೋವಧೆ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ, ಮುಂದೆ ತಮ್ಮ ಪತ್ರಿಕೆಯಲ್ಲಿ ಇಂತಹ ಅನುಚಿತ ವರ್ತನೆಯನ್ನು ಮುಂದುವರಿಸುವುದಿಲ್ಲ ಎಂಬ ಬದ್ಧತೆಯನ್ನು ವ್ಯಕ್ತಪಡಿಸಬೇಕು.
- ಇನ್ನು ಮುಂದೆ ಈ ಕಲೆಯನ್ನು ಗೌರವಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾ ಕಲಾವಿದರ ಆತ್ಮಗೌರವಕ್ಕೆ ಚ್ಯುತಿಯುಂಟು ಮಾಡಿದ ತನ್ನ ಪ್ರವೃತ್ತಿಯನ್ನು ತಿದ್ದಿಕೊಳ್ಳಬೇಕು.
- ಒಂದು ವೇಳೆ ಕ್ಷಮೆಯಾಚಿಸದಿದ್ದರೆ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ತಾಳಮದ್ದಳೆ ಕಲಾವಿದರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೇಕರಿ ಮಾಲೀಕರಿಗೆ ಪೊಲೀಸರಿಂದ ಕಿರುಕುಳ ಆರೋಪ | ಗೃಹ ಸಚಿವ ಪರಮೇಶ್ವರ್‌ಗೆ ಕಾಂಡಿಮೆಂಟ್ಸ್ ಸಂಘದಿಂದ ದೂರು



















