ಉಡುಪಿ: ಅಡುಗೆ ಹಾಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿನೂತನ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಜಿಲ್ಲಾ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬ್ರಹ್ಮಗಿರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ರಸ್ತೆಯಲ್ಲೇ ಒಲೆ ಹಾಕಿ ಚಹಾ ತಯಾರಿಸಿ ಜನರಿಗೆ ಹಂಚುವ ಮೂಲಕ ಗ್ಯಾಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ದರವನ್ನು 60 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ದರವನ್ನು 115 ರೂಪಾಯಿ ಹೆಚ್ಚಿಸಿರುವುದನ್ನು ಖಂಡಿಸಿದ ಕಾರ್ಯಕರ್ತರು, ಇದರಿಂದ ದೇಶದ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ದೇಶದಲ್ಲಿ ಗ್ಯಾಸ್ ದರ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ, ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ದರ ಏರಿಕೆ ಮಾಡಿರುವುದಾಗಿ ಕಾರ್ಯಕರ್ತರು ಕಿಡಿಕಾರಿದ್ದಾರೆ.
ವಾಣಿಜ್ಯ ಸಿಲಿಂಡರ್ ದರ ಹೆಚ್ಚಳದಿಂದ ಹೋಟೆಲ್ ಉದ್ಯಮಕ್ಕೂ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ಯಾಸ್ ಸಿಲಿಂಡರ್ ಮೇಲೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರ ಭಾವಚಿತ್ರಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲೇ ಪ್ರತಿಭಟನೆ ನಡೆದ ಕಾರಣ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ : ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಆರೋಪ | ಸಮತಾ ಸೈನಿಕ ದಳದಿಂದ ಪ್ರತಿಭಟನೆ



















