ಉಡುಪಿ: ಹೆಣ್ಣುಮಕ್ಕಳ ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಅಕ್ಕಪಡೆ” ಯೋಜನೆ’ಯನ್ನು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಇದು ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ಅಭಯದೊಂದಿಗೆ ರಕ್ಷಣೆ ನೀಡುವುದಲ್ಲದೇ, ಭಯಮುಕ್ತ ವಾತಾವರಣವನ್ನೂ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸಲಿದ್ದು, ಹೆಣ್ಣು ಮಕ್ಕಳು ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾಗದಂತೆ ಅವರುಗಳಿಗೆ ಸುರಕ್ಷತಾ ಭಾವನೆ ಮೂಡಿಸಿ, ಸ್ವತಂತ್ರವಾಗಿ ಬದುಕಲು ಧೈರ್ಯ ತುಂಬಿಸುವ ಕೆಲಸವನ್ನು ಮಾಡಲಿದೆ. ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಹಾಗೂ ಅವರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಕ್ಕಪಡೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ತರಬೇತಿ ಹೊಂದಿದ ಅಕ್ಕಪಡೆಯ ಸದಸ್ಯರು ಶಾಲಾ-ಕಾಲೇಜು, ಬಸ್/ರೈಲ್ವೆ ನಿಲ್ದಾಣಗಳು, ದೇವಸ್ಥಾನ, ಬಾಲಕಿಯರು ಮತ್ತು ಮಹಿಳೆಯರ ಹಾಸ್ಟಲ್, ಪಿಜಿ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಗಸ್ತು ತಿರುಗುವುದರೊಂದಿಗೆ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಾಗೂ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಅಕ್ಕ ಪಡೆಯ ವಾಹನದಲ್ಲಿ 4 ಮಂದಿ ತರಬೇತಿ ಪಡೆದ ಗೃಹ ರಕ್ಷಕಿಯರು ಮತ್ತು ಪೊಲೀಸ್ ಇಲಾಖೆಯ ಒಬ್ಬರು ಡ್ರೈವರ್ ಅನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಗ್ಗೆ 7ರಿಂದ ಅಪರಾಹ್ನ 2 ಗಂಟೆ ಹಾಗೂ ಅಪರಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಎರಡು ಪಾಳಿಗಳಲ್ಲಿ ಈ ಪಡೆ ಕಾರ್ಯನಿರ್ವಸಲಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ 181 ಹಾಗೂ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡುವುದರ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳು ಅಕ್ಕಪಡೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಬಳ್ಳಾರಿ ಫೈರಿಂಗ್ | ಸಿದ್ದರಾಮಯ್ಯ, ಅಮಿತ್ ಶಾಗೆ ಪ್ರತ್ಯೇಕ ಪತ್ರ ; ಝೆಡ್ ಶ್ರೇಣಿ ಭದ್ರತೆ ಕೋರಿದ ಜನಾರ್ದನ ರೆಡ್ಡಿ!



















