ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿರುವ ಗಂಗೊಳ್ಳಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಮಾಡುವಂತೆ ಇಂದು(ಮಂಗಳವಾರ) ವೀರ ಸಾವರ್ಕರ್ ಬಳಗ ಗಂಗೊಳ್ಳಿ ವತಿಯಿಂದ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಲಾಯಿತು.
ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಲ್ಯಾರ್ ಬೆಟ್ಟು ಸಾರ್ವಜನಿಕ ರುದ್ರಭೂಮಿಯನ್ನು ಗಂಗೊಳ್ಳಿ ಭಾಗದ ಶೇಕಡ 60ರಷ್ಟು ಜನರು ಬಳಸುತ್ತಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ನ ಕೊರತೆ, ರುದ್ರಭೂಮಿಗೆ ಬರುವಂತ ಮಾರ್ಗದ ಅಭಿವೃದ್ಧಿ ಹಾಗೆ ಮಳೆಗಾಲದಲ್ಲಿ ನಿಲ್ಲಲು ತಂಗುದಾಣದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂದುವರಿದು ಅಧಿಕಾರಿಗಳು ಈ ಕುರಿತು ನಿರ್ಲಕ್ಷ ತೋರಿ ರುದ್ರಭೂಮಿ ಅಭಿವೃದ್ಧಿ ಮಾಡದೇ ಇದ್ದಲ್ಲಿ ಪಂಚಾಯತ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
