ಉಡುಪಿ: ಕಾರ್ಕಳ ತಾಲ್ಲೂಕಿನ ಪುತ್ತಿಗೆ ಪದವು ಎಂಬಲ್ಲಿ ಸುಮಾರು 30 ಅಡಿ ಅಳದ ತೆರದ ಬಾವಿಯೊಂದಕ್ಕೆ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ಸುರಂಗದೊಳಗೆ ರಾತ್ರಿಯಿಡಿ ಸಿಲುಕಿಕೊಂಡ ಆತನನ್ನು ಕಾರ್ಕಳ ಅಗ್ನಿ ಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಾಧಕೃಷ್ಣ (38) ಜೀವಾಪಾಯದಿಂದ ಪಾರಾದ ವ್ಯಕ್ತಿ. ರಾತ್ರಿ ಸಂದರ್ಭದಲ್ಲಿ ಇದೇ ಪರಿಸರದ ಮೂಲಕ ಹಾದು ಹೋದಾಗ ತೆರೆದ ಬಾವಿ ಇರುವುದು ಗಮನಕ್ಕೆ ಬಾರದೇ ಆಯತಪ್ಪಿ ಬಾವಿಯೊಳಗೆ ಬಿದ್ದಿರುತ್ತಾನೆ. ಬಾವಿಯೊಳಗೆ 5 ಅಡಿ ನೀರು ಶೇಖರಣೆಗೊಂಡಿತ್ತು. ಬಾವಿಯ ಒಂದು ಪಾರ್ಶ್ವದಲ್ಲಿ ಸುರಂಗ ಮಾರ್ಗವು ಇತ್ತು.

ಬಿದ್ದ ರಭಸಕ್ಕೆ ಅವರು ಬಾವಿಯ ಒಳಗಿದ್ದ ಸುಮಾರು 20 ಅಡಿ ಆಳದ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಇದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಗುರುವಾರ ಮಧ್ಯಾಹ್ನದ ವೇಳೆಗೆ ಇದೇ ಬಾವಿಯೊಳಗಿನಿಂದ ಯುವಕನ ಅರ್ತನಾದ ಕೇಳಿದ ಕಟ್ಟಿಗೆ ಸಂಗ್ರಹಿಸಲೆಂದು ಬಂದಿದ್ದ ಮಹಿಳೆಯರ ಗುಂಪು ಸ್ಥಳೀಯರಿಗೆ ಮಾಹಿತಿ ರವಾಯಿಸಿದರು.
ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ಬಂದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿ ಜಯ ಮೂಲ್ಯ ಹಾಗೂ ರೂಪೇಶ್ ಬಾವಿಯೊಳಗೆ ಇಳಿದಿದ್ದರು. ಇವರಿಗೆ ಸಹೋದ್ಯೋಗಿಗಳಾದ ನಿತ್ಯಾನಂದ ಮತ್ತು ಬಸವರಾಜ ಸಾಥ್ ನೀಡಿದರು. ಬಾವಿಯ ಕತ್ತಲೆ ಮತ್ತು ಸುರಂಗದ ಸಂಕೀರ್ಣತೆ ನಡುವೆಯೂ ಅಗ್ನಿಶಾಮಕ ದಳದವರು ರಾಧಾಕೃಷ್ಣ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ | ಇಬ್ಬರು ಖರ್ತನಾಕ್ ಕಳ್ಳಿಯರು ಅರೆಸ್ಟ್



















