ಉಡುಪಿ : ಕ್ರೇನ್ ಹರಿದು ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಕುಂದಾಪುರದ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ತೆಕ್ಕಟ್ಟೆ ಗ್ರಾಮದ ಅಭಿಷೇಕ್ ಪೂಜಾರಿ ಮೃತ ಯುವಕ.
ತೆಕ್ಕಟ್ಟೆಯ ಜಂಕ್ಷನ್‌ನಲ್ಲಿ ಸ್ಕೂಟರ್ ಸವಾರ ಅಭಿಷೇಕ್ ಪೂಜಾರಿ (23) ಅವರು ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಾಗ, ಹಿಂದಿನಿಂದ ಬಂದ ಕ್ರೇನ್ ಅವರ ಮೇಲೆ ಹರಿದಿದೆ. ಕೂಡಲೇ ಅಭಿಷೇಕ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.