ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕರಿಗಾಗಿ ದೆಹಲಿಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಕೊನೆಯ ಸಾಲಿನಲ್ಲಿ ಕುಳಿತಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟ ಟೀಕಿಸಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, “ಉದ್ಧವ್ ಠಾಕ್ರೆ ಅವರು ಎನ್‌ಡಿಎಯಲ್ಲಿದ್ದಾಗ ಯಾವಾಗಲೂ ಮುಂಚೂಣಿ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಈಗ ಅವರು ‘ಇಂಡಿಯಾ’ ಮೈತ್ರಿಕೂಟದಲ್ಲಿ ಯಾವ ರೀತಿ ಗೌರವ ಪಡೆಯುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಧಿಕಾರ ಇಲ್ಲದಿದ್ದಾಗ ಅವರಿಗೆ ಏನಾಗುತ್ತದೆ ಎಂಬುದನ್ನು ನೋಡುವುದು ನೋವುಂಟುಮಾಡುತ್ತದೆ” ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಉದ್ಧವ್ ಬಣಕ್ಕೆ ಟಾಂಗ್ ನೀಡಿದ್ದು, “ಸ್ವಾಭಿಮಾನವನ್ನು ಮಾರಿಕೊಳ್ಳುವ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಆದರ್ಶಗಳನ್ನು ಕೈಬಿಟ್ಟವರಿಗೆ ಇದ್ಯಾವುದೂ ನೋವಾಗುವುದಿಲ್ಲ. ಕಾಂಗ್ರೆಸ್ ಅವರಿಗೆ ಅವರ ಸ್ಥಾನವನ್ನು ತೋರಿಸಿದೆ” ಎಂದು ಹೇಳಿದ್ದಾರೆ. ಬಿಜೆಪಿಯು ಠಾಕ್ರೆ ಕೊನೆಯ ಸಾಲಿನಲ್ಲಿ ಕುಳಿತಿದ್ದ ಚಿತ್ರವನ್ನು ಹಂಚಿಕೊಂಡು, “ಈ ಚಿತ್ರದಲ್ಲಿ ಸ್ವಾಭಿಮಾನವನ್ನು ಹುಡುಕಿ!” ಎಂದು ಬರೆದು ವ್ಯಂಗ್ಯವಾಡಿದೆ.
ಉದ್ಧವ್ ಬಣದ ಸ್ಪಷ್ಟನೆ:
ಈ ಟೀಕೆಗಳಿಗೆ ತಿರುಗೇಟು ನೀಡಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಧವ್ ಠಾಕ್ರೆ ಅವರು ಉದ್ದೇಶಪೂರ್ವಕವಾಗಿ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಮುಂಭಾಗದ ಸಾಲಿನಲ್ಲಿದ್ದಾಗ ಅಲ್ಲಿನ ದೊಡ್ಡ ಪರದೆಯ ಮೇಲೆ ನಡೆಯುತ್ತಿದ್ದ ಪ್ರಸ್ತುತಿಯನ್ನು ನೋಡಲು ಕಷ್ಟವಾಗುತ್ತಿತ್ತು. ಹಾಗಾಗಿ, ಅದನ್ನು ಸ್ಪಷ್ಟವಾಗಿ ನೋಡಲು ನಾವು ಹಿಂಬದಿಯ ಸಾಲಿಗೆ ಹೋಗಿ ಕುಳಿತೆವು” ಎಂದು ಅವರು ಹೇಳಿದ್ದಾರೆ. ಬಿಜೆಪಿ ಐಟಿ ಸೆಲ್ ನಿರುದ್ಯೋಗಿಯಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಆಯೋಗದ ಅಕ್ರಮದ ವಿವರ:
ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಅಕ್ರಮಗಳನ್ನು ನಡೆಸುತ್ತಿದೆ ಎಂಬ ಆರೋಪಗಳ ಕುರಿತು ಪ್ರಸ್ತುತಿ ನೀಡುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಈ ಭೋಜನಕೂಟವನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಉದ್ಧವ್ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವುತ್ ಅವರು ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿವೆ.



















