ಮೈಸೂರು: ಉದಯಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ಕಲ್ಲು ತೂರಾಟ ನಡೆಸಿದ ಪುಂಡರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಅಧಿಕ ಜನರ ಮೇಲೆ ಪೊಲೀಸರು ಎಫ್ ಐರ್ ದಾಖಲಿಸಿದ್ದಾರೆ. ಈಗ ಆ ಪುಂಡರಿಗೆ ಜಾಮೀನು ಕೊಡಿಸಲು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಮುಂದಾಗಿದ್ದಾರೆ.
ಈ ಪ್ರಕರಣದಲ್ಲಿ ಸಾವಿರಕ್ಕೂ ಅಧಿಕ ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ, ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿಯನ್ನು (Maulvi Mufti Mushtaq Mactoli) 15 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಕೋರ್ಟ್ ನೀಡಿದೆ. ಆರೋಪಿಗಳಿಗೆ ಜಾಮೀನು ಕೊಡಿಸುವುದಕ್ಕಾಗಿ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ (Abdul Razack) ಮೈಸೂರಿಗೆ ತೆರಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪೋಲೀಸರ ಮೇಲೆ ಯಾರು ಹಲ್ಲೆ ಮಾಡಿದರೂ ಅದು ತಪ್ಪು. ಹೀಗಾಗಿ ನಾನು ಬಹಿರಂಗ ಕ್ಷಮೆ ಕೇಳುತ್ತೇನೆ. ಪ್ರಕರಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಇದರಲ್ಲಿ ಸಣ್ಣ ಪುಟ್ಟ ಹುಡುಗರು, ಅಮಾಯಕರು ಕೂಡ ಇದ್ದಾರೆ. ಹೀಗಾಗಿ ಅವರನ್ನು ಹೊರ ತರುವುದಕ್ಕಾಗಿ ವಕೀಲರನ್ನು ನೇಮಕ ಮಾಡಲು ಬಂದಿದ್ದೇನೆ ಎಂದಿದ್ದಾರೆ.
ಉದಯಗಿರಿಯಲ್ಲಿ ಮುಂದೆ ಒಂದು ಶಾಂತಿ ಸಭೆ ಮಾಡೋಣ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದ ರೀತಿ ನೋಡಿಕೊಳ್ಳೋಣ. ಪ್ರವಾದಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಿಗಾದರೂ ಕೋಪ ಬರುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಸೆಕ್ಯೂಲರ್ ಪಕ್ಷ. ಸಿದ್ದರಾಮಯ್ಯ ಅಂದರೆ ಒಂದು ರೀತಿ ಪ್ರೀತಿ ಜಾಸ್ತಿ. ನಾನಿಲ್ಲಿ ಯಾವುದೇ ಪಕ್ಷದ ಪರವಾಗಿ ಬಂದಿಲ್ಲ. ನಾನು ಯಾವುದೇ ಪಕ್ಷದ ವಕ್ತಾರನಲ್ಲ ಎಂದಿದ್ದಾರೆ.