ಉದಯಪುರ: ಖಾಸಗಿ ಐಟಿ ಕಂಪನಿಯೊಂದರ ಸಿಇಒ ಮತ್ತು ಹಿರಿಯ ಮಹಿಳಾ ಅಧಿಕಾರಿಯೇ ಸೇರಿಕೊಂಡು ತಮ್ಮದೇ ಕಂಪನಿಯ ಮಹಿಳಾ ಉದ್ಯೋಗಿಯ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಉದಯಪುರದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ‘ಜಿಕೆಎಂ ಐಟಿ ಪ್ರೈವೇಟ್ ಲಿಮಿಟೆಡ್’ನ ಸಿಇಒ ಜಿತೇಶ್ ಸಿಸೋಡಿಯಾ, ಅದೇ ಕಂಪನಿಯ ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ ಮತ್ತು ಆಕೆಯ ಪತಿ ಗೌರವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಡ್ಯಾಶ್‌ಕ್ಯಾಮ್ (ಕ್ಯಾಮೆರಾ) ದೃಶ್ಯಾವಳಿ ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಡಿಸೆಂಬರ್ 20ರಂದು ಶೋಭಾಗ್‌ಪುರ ಪ್ರದೇಶದ ಹೋಟೆಲ್ ಒಂದರಲ್ಲಿ ಸಿಇಒ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸಲಾಗಿತ್ತು. ರಾತ್ರಿ 9 ಗಂಟೆಗೆ ಪಾರ್ಟಿಗೆ ಹೋಗಿದ್ದ ಸಂತ್ರಸ್ತೆ, ಮಧ್ಯರಾತ್ರಿ 1.30ರ ಸುಮಾರಿಗೆ ಅಮಲೇರಿದ ಸ್ಥಿತಿಯಲ್ಲಿದ್ದರು. ಈ ವೇಳೆ ಅವರನ್ನು ಮನೆಗೆ ಬಿಡುವುದಾಗಿ ಹೇಳಿ ಅಥವಾ ‘ಆಫ್ಟರ್ ಪಾರ್ಟಿ’ ನೆಪದಲ್ಲಿ ಆರೋಪಿ ಶಿಲ್ಪಾ ಸಿರೋಹಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಕಾರಿನಲ್ಲಿ ಅದಾಗಲೇ ಸಿಇಒ ಜಿತೇಶ್ ಮತ್ತು ಶಿಲ್ಪಾಳ ಪತಿ ಗೌರವ್ ಇದ್ದರು. ದಾರಿಯಲ್ಲಿ ಸಂತ್ರಸ್ತೆಗೆ ಧೂಮಪಾನ ಮಾಡುವಂತೆ ಬಲವಂತ ಮಾಡಲಾಯಿತು ಎನ್ನಲಾಗಿದೆ. ನಂತರ ಪ್ರಜ್ಞೆ ಕಳೆದುಕೊಂಡ ಸಂತ್ರಸ್ತೆಯ ಮೇಲೆ ಸಿಇಒ ಅಸಭ್ಯವಾಗಿ ವರ್ತಿಸಿದ್ದು, ನಂತರ ಮೂವರೂ ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅವರನ್ನು ಮನೆಗೆ ಬಿಡಲಾಗಿದೆ.
ಸಾಕ್ಷಿಯಾದ ಡ್ಯಾಶ್‌ಕ್ಯಾಮ್:
ಪೂರ್ತಿ ಪ್ರಜ್ಞೆ ಬಂದಾಗ ಸಂತ್ರಸ್ತೆಗೆ ತನ್ನ ಕಿವಿಯೋಲೆ, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿರುವುದು ಹಾಗೂ ಖಾಸಗಿ ಭಾಗಗಳಲ್ಲಿ ಗಾಯಗಳಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಕಾರಿನಲ್ಲಿದ್ದ ವೆಬ್‌ಕ್ಯಾಮ್/ಡ್ಯಾಶ್‌ಕ್ಯಾಮ್ ಪರಿಶೀಲಿಸಿದಾಗ, ಅದರಲ್ಲಿ ಘಟನೆಯ ಆಡಿಯೋ ಮತ್ತು ವಿಡಿಯೋ ರೆಕಾರ್ಡ್ ಆಗಿರುವುದು ಕಂಡುಬಂದಿದೆ. ಇದು ತನಿಖೆಗೆ ಪ್ರಮುಖ ಸಾಕ್ಷಿಯಾಗಿದೆ. ವೈದ್ಯಕೀಯ ವರದಿಯಲ್ಲಿಯೂ ಸಂತ್ರಸ್ತೆಯ ಮೇಲೆ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಕಂಟಪೂರ್ತಿ ಕುಡಿಸಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ | ಆರೋಪಿ ಅರೆಸ್ಟ್!



















