ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇನಲ್ಲಿ ಇತ್ತೀಚೆಗೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಸ್ತೆ ಸುರಕ್ಷತೆ ಸುಧಾರಣೆ ದೃಷ್ಟಿಯಿಂದ ಎಕ್ಸ್ ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಯಾಕೆ ನಿಷೇಧ?
ಕಳೆದ ಭಾನುವಾರ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ರಾಂಗ್ ಸೈಡಿನಿಂದ ಬಂದ ದ್ವಿಚಕ್ರ ವಾಹನವೊಂದು ಕಾರಿಗೆ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಹಾಗಾಗಿ, ರಸ್ತೆ ಸುರಕ್ಷತೆ ಸಲುವಾಗಿ ಪ್ರಾಧಿಕಾರವು ದ್ವಿಚಕ್ರ ವಾಹನಗಳನ್ನು ನಿಷೇಧಿಸಿದೆ. ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೈಕುಗಳು ಎಕ್ಸ್ ಪ್ರೆಸ್ ವೇ ಪ್ರವೇಶಿಸುವುದನ್ನು ತಡೆಯಲು ಗಸ್ತು ತಂಡಗಳಿಗೆ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ
ಒಟ್ಟು 260 ಕಿಲೋಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಕರ್ನಾಟಕ ವ್ಯಾಪ್ತಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕರ್ನಾಟಕದೊಳಗೆ 71 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗುವ ಹೆದ್ದಾರಿಯ ಉಳಿದ ಭಾಗದ ಕಾಮಗಾರಿ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್‌ವೇ ಹೊಸಕೋಟೆ, ಮಾಲೂರು ಮತ್ತು ಕೆಜಿಎಫ್ ಸೇರಿ ಹಲವು ಸ್ಥಳಗಳಿಗೆ ಸಂಪರ್ಕ ಒದಗಿಸಿದೆ.
ಕಾನೂನು ಹೇಳುವುದೇನು?
ಕಾನೂನಿನ ಪ್ರಕಾರ, ದೇಶಾದ್ಯಂತ ಎಕ್ಸ್ ಪ್ರೆಸ್ ವೇಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಈ ರಸ್ತೆಗಳನ್ನು ಅತಿ ವೇಗದ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ವೇಗದ ಮಿತಿ ಗಂಟೆಗೆ 120 ಕಿ.ಮೀ. ವರೆಗೆ ಇರುತ್ತದೆ. ಎಕ್ಸ್ ಪ್ರೆಸ್ ವೇಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವು ಸವಾರರಿಗೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರಿಗೂ ತೀವ್ರ ಅಪಾಯವನ್ನುಂಟು ಮಾಡುತ್ತದೆ.