ಹೈದರಾಬಾದ್: ಮಕ್ಕಳ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಎಂತಹ ಆಪತ್ತು ಎದುರಾಗಬಹುದು ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಹೈದರಾಬಾದ್‌ನಲ್ಲಿ ಕಾರಿನೊಳಗೆ ಸಿಲುಕಿಕೊಂಡು ಇಬ್ಬರು ಹೆಣ್ಣು ಮಕ್ಕಳು ಉಸಿರುಗಟ್ಟಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ.
ತೆಲಂಗಾಣದ ಹೈದರಾಬಾದ್‌ನ ರಂಗರೆಡ್ಡಿ ಜಿಲ್ಲೆಯ ವಸತಿ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ರಜೆ ಇರುವ ಕಾರಣ ಮಕ್ಕಳಿಬ್ಬರೂ ಅಜ್ಜಿಯ ಮನೆಗೆ ಹೋಗಿದ್ದರು. ಮನೆಯ ಹೊರಗೆ ಆಟವಾಡುತ್ತಿದ್ದರು. ಆಟ ಆಡುತ್ತಲೇ ಅವರಿಬ್ಬರೂ ಮನೆ ಹೊರಗೆ ನಿಲ್ಲಿಸಲಾಗಿದ್ದ ಕಾರೊಂದರೊಳಗೆ ಪ್ರವೇಶಿಸಿದ್ದಾರೆ. ಒಳಗೆ ಹೋದ ಮಕ್ಕಳಿಗೆ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಬಾಗಿಲು ಮುಚ್ಚಿಕೊಂಡಿದ್ದರಿಂದ ಒಳಗೆ ಆಮ್ಲಜನಕದ ಕೊರತೆ ಉಂಟಾಗಿದೆ. ಹೀಗಾಗಿ ಮಕ್ಕಳಿಬ್ಬರೂ ಉಸಿರುಗಟ್ಟಿ ಒದ್ದಾಡಿದ್ದಾರೆ. ಈ ವಿಷಯ ಮನೆಯವರಿಗಾಗಲೀ, ನೆರೆಹೊರೆಯವರಿಗಾಗಲೇ ಗೊತ್ತೇ ಆಗಲಿಲ್ಲ.
ಸುಮಾರು ಒಂದು ಗಂಟೆಯ ನಂತರ ಮಕ್ಕಳನ್ನು ಕಾಣುತ್ತಿಲ್ಲವಲ್ಲ ಎಂದು ಮನೆಯವರು ಹುಡುಕಾಟ ಆರಂಭಿಸಿದಾಗ. ಕಾರಿನೊಳಗೆ ಮಕ್ಕಳಿಬ್ಬರೂ ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದರಾದರೂ, ಅಷ್ಟರಲ್ಲೇ ಇಬ್ಬರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದರು. ಮೃತ ಮಕ್ಕಳನ್ನು ತನುಶ್ರೀ(4) ಮತ್ತು ಅಭಿನೇತ್ರಿ(5) ಎಂದು ಗುರುತಿಸಲಾಗಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಕುಟುಂಬದ ನಾಲ್ವರು ಮಕ್ಕಳು ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಇದೇ ರೀತಿ ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿದ್ದರು.



















