ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಅವರು ಚಿಕ್ಕೋಡಿ ತಾಲೂಕಿನ ಹಲವೆಡೆ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಇಂದು ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ಬಂದಿದ್ದ ಯುವಕನಿಗೆ ವಿದ್ಯುತ್ ಶಾಕ್ (Electric shock) ಹೊಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹೇಶ್ ಹುಣ್ಣರಗಿ (22) ವಿದ್ಯುತ್ ನಿಂದ ಗಾಯಗೊಂಡಿರುವ ಯುವಕ. ಮುಖ್ಯಮಂತ್ರಿ ನೋಡಲು ಯುವಕ ಮಹೇಶ್ ಮೇಲ್ಛಾವಣಿ ಮೇಲೆ ಹತ್ತಿದ್ದಾನೆ. ಈ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮುಖ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮಹೇಶ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲದೇ, ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ದೇವಸ್ಥಾನ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆಯರಿಬ್ಬರು ಸಾವನ್ನಪ್ಪಿದ್ದಾರೆ. ಕಲಾವತಿ ಬೀದರವಾಡಿ(37), ಸವಿತಾ ಒಂಟಿ(36) ಸಾವನ್ನಪ್ಪಿದ ದುರ್ದೈವಿಗಳು. ವಾಲ್ಮೀಕಿ ದೇವಸ್ಥಾನ ಸ್ವಚ್ಛಗೊಳಿಸಿ ಶೆಟರ್ ಎಳೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಲ್ಲದೇ, ಕಲಾವತಿ ಪತಿ ಮಾರುತಿ ಬೀದರವಾಡಿ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.