ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ದಾವಣಗೆರೆ ಹಾಗೂ ಧಾರವಾಡದಲ್ಲಿ ಇಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಹಾಸನದಲ್ಲಿ ಈಗಾಗಲೇ ೩೦ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಮೃತಪಟಿರುವುದಾಗಿ ವರದಿಯಾಗಿದೆ. ಈ ಆತಂಕದ ನಡುವೆಯೇ ಇದೀಗ ರಾಜ್ಯದೆಲ್ಲೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ದಾವಣಗೆರೆಯಲ್ಲಿ 22 ವರ್ಷದ ಯುಗವಕನೊಬ್ಬ ಸಾವನ್ನಪ್ಪಿದ್ದು, ದಾವಣಗೆರೆಯ ಕಾಲೇಜೊಂದರಲ್ಲಿ ಮೃತ ಯುವಕ ವ್ಯಾಸಂಗ ಮಾಡುತ್ತಿದ್ದು, ಮನೆಯಲ್ಲಿದ್ದಾಗ ಅಕ್ಷಯ್ ಏಕಾಏಕಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಧಾರವಾಡದ ಪುರೋಹಿತನಗರದಲ್ಲಿ ಜೀವಿತಾ ಕುಸೂಗೂರ ಕೂಡ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಅವರು ಮನೆಯಲ್ಲೇ ತಲೆ ಸುತ್ತು ಬಂದು ಬಿದ್ದಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಎಂಎಸ್ಸಿ ಇನ್ ಅಗ್ರಿಕಲ್ಚರ್ ಪದವಿ ಪಡೆದಿದ್ದ ಜೀವಿತಾ, ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ದುರದೃಷ್ಟವಶಾತ್ ಅವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಎರಡು ಪ್ರಕರಣಗಳ ನಡುವೆ ಮಂಡ್ಯದಲ್ಲಿ ವ್ಯಕ್ತಿಯೊಬ್ಬರು ಬಿಸಿ ನೀರು ಕುಡಿಯುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಪ್ರಕರಣ ನಡೆದಿದೆ. ಅಟ್ಟುವನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎನ್ನುವವರು ಮೃತ ಪಟ್ಟ ವ್ಯಕ್ತಿ. ಜಮೀನಿಗೆ ತೆರಳಿ ವಾಪಸ್ಸಾದ ಅವರು ಮನೆಗೆ ಬಂದು ಬಿಸಿ ನೀರು ಕುಡಿಯುವ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.



















