ಬೆಂಗಳೂರು: ಅತಿ ದೊಡ್ಡ ಜಾತ್ರೆಯೆಂದು ಪ್ರಸಿದ್ಧಿ ಪಡೆದಿದ್ದ ಹುಸ್ಕೂರು ಮದ್ದೂರಮ್ಮ ಜಾತ್ರೆಯ (Huskur Madduramma Fair) ತೇರು ನೆಲಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕೆಳಹಂತದ 4 ಅಧಿಕಾರಿಗಳನ್ನು ಜಿಲ್ಲಾಡಳಿತದಿಂದ ಅಮಾನತು ಮಾಡಲಾಗಿದೆ. ಬೆಂಗಳೂರು ಹೊರವಲಯದ (Bengaluru Rural) ಆನೇಕಲ್ (Anekal) ತಾಲೂಕಿನ ಹುಸ್ಕೂರು ಜಾತ್ರೆ ಆ ಭಾಗದಲ್ಲಿ ಪ್ರಸಿದ್ಧಿ ಪಡೆದಿತ್ತು. ಸುತ್ತಮುತ್ತಲ ಊರುಗಳಿಂದ ಸುಮಾರು ಹತ್ತಕ್ಕೂ ಹೆಚ್ಚು ತೇರುಗಳನ್ನು ಎಳೆದು ತಂದು ಜಾತ್ರೆ ನಡೆಸುತ್ತಿದ್ದರು. ಮಾ. 22ರ ಶನಿವಾರದಂದು ರಾಯಸಂದ್ರ ಹಾಗೂ ದೊಡ್ಡ ನಾಗಮಂಗಲ ತೇರುಗಳು ನೆಲಕ್ಕೆ ಉರುಳಿದ್ದವು. ಈ ವೇಳೆ ಕೆಳಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು, 8ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಆನೇಕಲ್‌ನ ತಾಲೂಕು ಆಡಳಿತ ಈ ವಿಚಾರದಲ್ಲಿ ಮೌನ ವಹಿಸಿತ್ತು. ಸದ್ಯ ಜಿಲ್ಲಾಡಳಿತ 4 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಅಲ್ಲದೇ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಅವರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಾದ ಆರ್.ಐ.ಪ್ರಶಾಂತ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕ್ ಎಂಬುವವರನ್ನು ಅಮಾನತು ಮಾಡಿದ್ದಾರೆ.