ಉಗ್ರರ ದಾಳಿಗೆ ಇಬ್ಬರು ಕನ್ನಡಿಗರು ಬಲಿಯಾಗಿದ್ದು, ಇಂದು ಬೆಂಗಳೂರಿನಲ್ಲಿ ಕನ್ನಡಿಗರ ಪಾರ್ಥಿವ ಶರೀರ ರಾಜ್ಯಕ್ಕೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಪಾರ್ಥೀವ ಶರೀರದ ಮುಂದೆ ಪತ್ನಿ, ಸಂಬಧಿಕರು ಕಣ್ಣೀರು ಸುರಿಸಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ನಿವಾಸದಲ್ಲಿ ಮಡುಗಟ್ಟಿದ ಶೋಕ ಮುಗಿಲು ಮುಟ್ಟಿತ್ತು. ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
ಸಚಿವ ಸೋಮಣ್ಣ ಜೊತೆ ಕುಟುಂಬಸ್ಥರು ಮತ್ತು ಮೃತದೇಹಗಳು ಬೆಂಗಳೂರಿಗೆ ಆಗಮಿಸಿವೆ. ರಾತ್ರಿ 3:45ಕ್ಕೆ ಬೆಂಗಳೂರಿಗೆ ಮೃತದೇಹಗಳು ವಿಶೇಷ ವಿಮಾನದಲ್ಲಿ ಆಗಮಿಸಿವೆ. ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಅಧಿಕಾರಿಗಳು ಏರ್ ಪೋರ್ಟ್ ಗೆ ತೆರಳಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದ್ದಾರೆ.
ನಾನು ಸರ್ಕಾರದ ಪರವಾಗಿ ಏಳು ಕೋಟಿ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಉಗ್ರರನ್ನು ಸಂಪೂರ್ಣ ವಾಗಿ ಮಟ್ಟಹಾಕಬೇಕು. ಉಗ್ರರನ್ನು ನಮ್ಮ ದೇಶದಿಂದ ಹೊರಹಾಕಬೇಕು. ಯಾವುದೇ ಕಾರಣಕ್ಕೂ ರಿಯಿಯಾತಿ ತೋರಿಸದೆ ಎಲ್ಲ ಉಗ್ರರನ್ನು ನಾಶಪಡಿಸಬೇಕು. ಅಮಾಯಕ ಜನರನ್ನು ಹಾಡಹಗಲೇ ಹೆಂಡತಿ ಎದುರೇ ಶೂಟ್ ಮಾಡುವುದು ಇದೆಯಲ್ಲ ಅದಕ್ಕಿಂತ ಹೇಯ ಕೃತ್ಯ ಮತ್ತೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಲ್ವಾಮ ಆದ ನಂತರ ಸುಮಾರು 60 ಜನ ಸೈನಿಕರು ಮರಣ ಹೊಂದಿದರು. ಅವರು ಎಲ್ಲೇ ಇದ್ದರೂ ದೇಶದಲ್ಲಿ ಇರಲು ಅವರು ಅರ್ಹರಲ್ಲ. ಅವರನ್ನು ದೇಶದಿಂದ ಹೊರ ಹಾಕಬೇಕೆಂದು ಕೇಂದ್ರವನ್ನು ನಾನು ಒತ್ತಾಯಿಸುತ್ತೇನೆ. ಇಲ್ಲಿ ಇಂಟಲಿಜೆನ್ಸ್ ವಿಫಲವಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಸರ್ಕಾರ 10 ಲಕ್ಷ ರೂ. ಪರಿಹಾರ ನೀಡುತ್ತದೆ. ನಾನು ಒಂದು ಅಧಿಕಾರಿಗಳ ತಂಡವನ್ನು ಸಂತೋಷ್ ಲಾಡ್ ನೇತೃತ್ವದಲ್ಲಿ ಕಳುಹಿಸಿದ್ದೆ. ಕನ್ನಡಿಗರನ್ನು ಮರಳಿ ಕರೆತರುವಂತೆ ಸೂಚಿಸಿದ್ದೆ. ಕೇಂದ್ರ ಸರ್ಕಾರ ಮತ್ತೆ ಇಂತಹ ಕ್ರೌರ್ಯ ಮರುಕಳಿಸದಂತೆ ನೋಡಿಕೊಳ್ಳಲಿ ಎಂದಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇಂದು ಮಧ್ಯಾಹ್ನ 3ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.


















