ನವದೆಹಲಿ: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಜಾಗ್ವಾರ್ ಫೈಟರ್ ಬಾಂಬರ್ ವಿಮಾನ ಪತನದಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಮೃತ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು (31) ಮತ್ತು ಫ್ಲೈಟ್ ಲೆಫ್ಟಿನೆಂಟ್ ರಿಷಿ ರಾಜ್ ಸಿಂಗ್ (23) ಎಂದು ಗುರುತಿಸಲಾಗಿದೆ. ಸ್ಕ್ವಾಡ್ರನ್ ಲೀಡರ್ ಸಿಂಧು ಹರಿಯಾಣದ ರೋಹ್ಟಕ್ ಮೂಲದವರಾಗಿದ್ದರೆ, ಲೆಫ್ಟಿನೆಂಟ್ ಸಿಂಗ್ ರಾಜಸ್ಥಾನದ ಪಾಲಿ ನಿವಾಸಿ.
ಪೈಲಟ್‌ಗಳು ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ನಿನ್ನೆ ಮಧ್ಯಾಹ್ನ ಚುರು ಜಿಲ್ಲೆಯ ಭನೋದಾ ಗ್ರಾಮದ ಬಳಿ ಈ ಎರಡು ಆಸನಗಳ ಯುದ್ಧ ವಿಮಾನ ಪತನಗೊಂಡಿದೆ. ಅಪಘಾತಕ್ಕೆ ಕಾರಣವೇನೆಂದು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ಘೋಷಿಸಿದೆ.
“ಐಎಎಫ್ ಜಾಗ್ವಾರ್ ತರಬೇತಿ ವಿಮಾನವು ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ಇಂದು ರಾಜಸ್ಥಾನದ ಚುರು ಬಳಿ ಇದು ಪತನಗೊಂಡಿದೆ. ಅಪಘಾತದಲ್ಲಿ ಇಬ್ಬರು ಪೈಲಟ್‌ಗಳೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಇಂದು ಅವರಿಬ್ಬರೂ ಅಸುನೀಗಿದ್ದಾರೆ. ವಿಮಾನ ಪತನದ ವೇಳೆ ಯಾವುದೇ ನಾಗರಿಕ ಆಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇಬ್ಬರು ಪೈಲಟ್‌ಗಳ ಪ್ರಾಣಹಾನಿ ಬಗ್ಗೆ ಐಎಎಫ್ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿರುವುದು ಇದು ಮೂರನೇ ಬಾರಿ. ಮೊದಲ ಘಟನೆ ಮಾರ್ಚ್ 7 ರಂದು ಹರ್ಯಾಣದ ಪಂಚಕುಲದಲ್ಲಿ ನಡೆದಿದ್ದರೆ, ಎರಡನೆಯದು ಏಪ್ರಿಲ್ 2 ರಂದು ಗುಜರಾತ್‌ನ ಜಾಮ್‌ನಗರದ ಬಳಿ ಸಂಭವಿಸಿತ್ತು.
ಜಾಗ್ವಾರ್ ವಿಮಾನಗಳ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು:
ಐಎಎಫ್ ಬಳಸುವ ಜಾಗ್ವಾರ್ ಫೈಟರ್ ಜೆಟ್‌ಗಳು ಹಳೆಯದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅವುಗಳನ್ನು ಭಾರೀ ಪ್ರಮಾಣದಲ್ಲಿ ನವೀಕರಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ಸುಮಾರು 120 ಇಂತಹ ಫೈಟರ್ ಜೆಟ್‌ಗಳು ಕಾರ್ಯಾಚರಣೆಯಲ್ಲಿವೆ.
ಈ ಅಪಘಾತವು ಈ ಜಾಗ್ವಾರ್ ವಿಮಾನಗಳು ಎಷ್ಟು ಸುರಕ್ಷಿತವಾಗಿವೆ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. 1979 ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಈ ವಿಮಾನಗಳಲ್ಲಿ ಹೆಚ್ಚಿನವು ಫ್ರಾನ್ಸ್‌ನ ಬ್ರೆಗುಯೆಟ್ ಮತ್ತು ಬ್ರಿಟಿಷ್ ಏರ್‌ಕ್ರಾಫ್ಟ್ ಕಾರ್ಪೊರೇಷನ್‌ನ ಜಂಟಿ ಉದ್ಯಮವಾದ SEPECAT ನಿಂದ ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟಿರುವಂಥದ್ದು.
ಬ್ರಿಟನ್, ಫ್ರಾನ್ಸ್, ಈಕ್ವೆಡಾರ್, ನೈಜೀರಿಯಾ ಮತ್ತು ಓಮನ್‌ನಂತಹ ದೇಶಗಳು ತಮ್ಮ ನೌಕಾಪಡೆಗಳಲ್ಲಿ ಜಾಗ್ವಾರ್‌ಗಳನ್ನು ಹೊಂದಿದ್ದವು. ಆದರೆ ಅವುಗಳನ್ನು ಬಹಳ ಹಿಂದೆಯೇ ಸೇವೆಯಿಂದ ಕೈಬಿಡಲಾಗಿವೆ. ಐಎಎಫ್ ಕೂಡ ಹಳೆಯ ಜಾಗ್ವಾರ್ ಮಾದರಿಗಳನ್ನು ಹಂತ ಹಂತವಾಗಿ ನಿವೃತ್ತಿಗೊಳಿಸುವ ನಿರೀಕ್ಷೆಯಿದೆ. ಆದರೆ, ಎಚ್ಎಎಲ್ ತೇಜಸ್ ಎಂಕೆ2, ರಫೇಲ್ ಮತ್ತು ಬಹು-ಪಾತ್ರದ ಯುದ್ಧ ವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಕಾರಣ ವಾಯುಪಡೆಯು ಅನಿವಾರ್ಯವಾಗಿ ಜಾಗ್ವಾರ್‌ಗಳ ಬಳಕೆಯನ್ನು ಮುಂದುವರಿಸುತ್ತಿದೆ.



















