ಚಿಕ್ಕಬಳ್ಳಾಪುರ: ಕಾಲೇಜಿನಲ್ಲಿ ಶೋಕಿಗಾಗಿ ಮನೆಕಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ ಅಭಿಷೇಕ್ ಬಂಧಿತ ವಿದ್ಯಾರ್ಥಿಗಳು. ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇನ್ನೂ ಚೇತನ್ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆ ನಿವಾಸಿ, ಅಭಿಷೇಕ್ ಮೂಲತಃ ಮಂಡ್ಯ ಜಿಲ್ಲೆಯವ. ಇಬ್ಬರೂ ಒಂದೇ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಸ್ನೇಹಿತರಾಗಿದ್ದರು. ಇಬ್ಬರಿಗೂ ಕಾಲೇಜಲ್ಲಿ ಶೋಕಿ ಮಾಡುವ ಖಯಾಲಿ ಇತ್ತಂತೆ. ಆದರೆ ಕೈಯಲ್ಲಿ ದುಡ್ಡಿಲ್ಲ, ಇದಕ್ಕಾಗಿ ಇಬ್ಬರು ಪ್ಲ್ಯಾನ್ ಮಾಡಿ ಚಿಕ್ಕಬಳ್ಳಾಪುರ ನಗರದ ಚೇತನ್ ಮನೆ ಪಕ್ಕದಲ್ಲೇ ಇರುವ ಮನೆಗಳಿಗೆ ಕನ್ನ ಹಾಕಿದ್ದಾರೆ.
ಚಾಮರಾಜಪೇಟೆಯ ಶಿಕ್ಷಕಿ ವಿನುತಾ ಹಾಗೂ ಶಾಂತಮ್ಮ ಎಂಬುವವರ ಮನೆಗಳಿಗೆ ನುಗ್ಗಿ ಚಿನ್ನಾಭರಣ ಸೇರಿ ಲಕ್ಷಾಂತರ ರೂ. ನಗದು ದೋಚಿ ಇಬ್ಬರು ಮೋಜು ಮಸ್ತಿ ಮಾಡಿದ್ದರು. ಆದರೆ ಈಗ ಚಿಕ್ಕಬಳ್ಳಾಪುರ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅಂದಹಾಗೆ ಚೇತನ್ ಹಾಗೂ ಅಭಿಷೇಕ್ ಮೊದಲು ವಿನುತಾ ಅವರ ಮನೆಗೆ ನುಗ್ಗಿ ಮನೆಯ ಬಿರುವಿನಿಲ್ಲಿದ್ದ ಸರಿಸುಮಾರು 6 ಲಕ್ಷ 25 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು. ತದನಂತರ ಇದೇ ಚಾಮರಾಜಪೇಟೆಯಲ್ಲಿ ಶಾಂತಮ್ಮ ಎಂಬುವವರ ಮನೆಗೆ ನುಗ್ಗಿ ಅವರ ಮನೆಯಲ್ಲೂ 85 ಸಾವಿರ ನಗದು, ಚಿನ್ನಾಭರಣಗಳನ್ನು ದೋಚಿದ್ದರು ಎಂದು ತಿಳಿದು ಬಂದಿದೆ..
ಇದನ್ನೂ ಓದಿ: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ವೃದ್ಧೆ ಸಜೀವ ದಹನ



















