ಬೀದರ್ : ಮಾದಕ ದ್ರವ್ಯ ಮುಕ್ತಗೊಳಿಸಲು ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ 1 24 ಸಾವಿರ ಮೌಲ್ಯದ ಮಾದಕ ದ್ರವ್ಯಗಳ ಸಿರಪ್ ವಶ ಸುಮಾರು 24,424 ರೂ. ಮೌಲ್ಯದ 100ಎಂಎಲ್ ಗಾತ್ರದ ಒಟ್ಟು 142 ನಾರ್ಕೋಟಿಕ್ ಮಾದಕ ದ್ರವ್ಯ ಅಂಶಗಳಿರುವ ಸಿರಪ್ ಬಾಟಲಿಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಹೀನ್ ಕಾಲೇಜು ಕ್ರಾಸ್ ಸಮೀಪ ಗುರುವಾರ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೆ ನಾರ್ಕೋಟಿಕ್ ಅಂಶ ಹೊಂದಿರುವ ಸಿರಪ್ ಬಾಟಲಿಗಳನ್ನು ಎರಡು ಬ್ಯಾಗ್‌ಗಳಲ್ಲಿ ಇಟ್ಟು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದರಿಂದ ಪೊಲೀಸರು ದಾಳಿ ನಡೆಸಿದರು.
ದಾಳಿಯ ವೇಳೆ ಆರೋಪಿಗಳಿಂದ ಸುಮಾರು 24,424 ರೂ. ಮೌಲ್ಯದ ಒಟ್ಟು 2142 ನಾರ್ಕೋಟಿಕ್ ಸಿರಪ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಈ ಸಿರಪ್‌ಗಳನ್ನು ಹೈದ್ರಾಬಾದ್‌ನಿಂದ ತಂದು ಜಿಲ್ಲೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ತಿಳಿಸಲಾಗಿದೆ. ಗಾಂಧಿಗಂಜ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಸರಬರಾಜು ಮಾಡುವುದು ಅಪರಾಧವಾಗಿದ್ದು, ಇಂತಹ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಪೊಲೀಸ್ ಇಲಾಖೆ ನಿರಂತರ ಕಾರ್ಯಚರಣೆ ಮುಂದುವರಿಸಲಿದೆ ಎಂದು ಎಸ್‌ಪಿ ಪ್ರದೀಪ್ ಗುಂಟಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಲಿವಿಂಗ್ ರಿಲೇಶನ್ಶಿಪ್‌ನಲ್ಲಿ ಜಗಳ : ನೇಣು ಹಾಕಿ ಕೊಲೆಗೈದ ದುಷ್ಟ



















