ಬೆಂಗಳೂರು : ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿ ಮೂಲದ ಇಮ್ರಾನ್ ಬಂಧಿತ ಆರೋಪಿಗಳು.
ಬಂಧಿತರಿಂದ 31 ಮೊಬೈಲ್ ಫೋನ್ಗಳು, 13 ಲ್ಯಾಪ್ಟಾಪ್, 16 ಸಿಮ್ ಕಾರ್ಡ್ಗಳು ಹಾಗೂ ನೊಂದವರ ಹೆಸರು ಮತ್ತು ಮೊಬೈಲ್ ನಂಬರ್ಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಜಯನಗರದ 9ನೇ ಬ್ಲಾಕ್ನಲ್ಲಿ M/S Multiwave Business Solutions ಹೆಸರಿನ ಕಂಪನಿ ಆರಂಭಿಸಿದ್ದ ಆರೋಪಿಗಳು ಅನ್ಯ ರಾಜ್ಯಗಳ ಸುಮಾರು 15 ಜನರನ್ನು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ಗಳನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರು ಸಾರ್ವಜನಿಕರಿಗೆ ಕರೆ ಮಾಡಿ ‘ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ’ ನಂಬಿಸುತ್ತಿದ್ದರು. ಇದಕ್ಕೆ ಒಪ್ಪಿ ಸ್ಪಂದಿಸುತ್ತಿದ್ದ ಸಾರ್ವಜನಿಕರಿಗೆ ಬ್ಯಾಂಕ್ ಖಾತೆಯ ವಿವರ ನೀಡಿ ಆನ್ಲೈನ್ ಮೂಲಕ ಹಣ ಪಡೆಯುತ್ತಿದ್ದರು. ನಂತರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡ ವಂಚಿಸುತ್ತಿದ್ದರು ಎನ್ನಲಾಗಿದೆ.
ಇದೇ ಮಾದರಿಯಲ್ಲಿ ವಂಚನೆಗೊಳಗಾದವರೊಬ್ಬರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಂಚನೆಗೆ ಬಳಸಲಾಗಿದ್ದ ನಂಬರ್ನ ಲೊಕೇಷನ್ ಆಧರಿಸಿದ್ದ ಪೊಲೀಸರು ಜಯನಗರದ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸಿದಾಗ ಆರೋಪಿಗಳ ಸಂಚು ಬಯಲಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಹೆಚ್ಚಾದ ಕಾಡಾನೆ ರೌಂಡ್ಸ್ | ಭಯಭೀತರಾದ ಸ್ಥಳೀಯರು!


















