ಭೋಪಾಲ್: ಮಧ್ಯಪ್ರದೇಶದ ಮೊರೆನಾದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರ ಶವ ಅವರ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳ ನಂತರ, ಆತನ ಹೆಣ್ಣುಮಕ್ಕಳೇ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಮೃತ ವ್ಯಕ್ತಿಯನ್ನು ಹರೇಂದ್ರ ಮೌರ್ಯ ಎಂದು ಗುರುತಿಸಲಾಗಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರು ನಿಜವಾಗಿಯೂ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬುದು ವರದಿ ಬಳಿಕ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆಘಾತಕಾರಿ ವೀಡಿಯೊದಲ್ಲಿ, ಹರೇಂದ್ರ ಅವರ ಕಾಲುಗಳನ್ನು ಅವರ ಪತ್ನಿಯು ಬಿಗಿಯಾಗಿ ಹಿಡಿದಿಟ್ಟುಕೊಂಡರೆ, ಅವರ ಹೆಣ್ಣುಮಕ್ಕಳು ಅಪ್ಪನ ಮೇಲೆ ಯದ್ವಾತದ್ವಾ ಕೋಲಿನಿಂದ ಹೊಡೆಯುತ್ತಿರುವ, ಹರೇಂದ್ರ ಅವರು ನೋವಿನಿಂದ ಕಿರುಚುತ್ತಿರುವ ದೃಶ್ಯವನ್ನು ಕಾಣಬಹುದು. ಒಂದು ಹಂತದಲ್ಲಿ, ಕಿರಿಯ ಮಗ ತನ್ನ ಸಹೋದರಿಯನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಆಕೆ, ತಮ್ಮನನ್ನೇ ಬೆದರಿಸಿ ನಿನಗೂ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ.
ಹರೇಂದ್ರ ಹಾಸಿಗೆಯಲ್ಲಿ ಬಿದ್ದು ಒದ್ದಾಡಿ, ಬೀಳು ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಅವನ ಹೆಂಡತಿ ಅವನನ್ನು ಗಟ್ಟಿಯಾಗಿ ಹಿಡಿದು ತಪ್ಪಿಸದಂತೆ ನೋಡಿಕೊಳ್ಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಹರೇಂದ್ರ ಅವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ.
ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಹರೇಂದ್ರ ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾನೆ. ಹರೇಂದ್ರ ಆಗಾಗ್ಗೆ ತಮ್ಮ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮಾರ್ಚ್ 1 ರಂದು ಹರೇಂದ್ರ ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನೂ ಆಯೋಜಿಸಿದ್ದರು.
ಮದುವೆಯೆಲ್ಲ ಮುಗಿದ ಬಳಿಕ, ಅವರ ಪತ್ನಿಯು ಪತಿಯಿಂದ ಬೇರ್ಪಟ್ಟು ತಮ್ಮ ತಂದೆಯ ಮನೆಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದರಿಂದ ವಿಚಲಿತನಾದ ಹರೇಂದ್ರ ತಮ್ಮ ಕೋಣೆಗೆ ನುಗ್ಗಿ ಬಾಗಿಲುಹಾಕಿಕೊಂಡಿದ್ದರು. ಹೊರಗೇ ಬರದೇ ಇದ್ದಾಗ ಬಾಗಿಲು ಒಡೆದು ಕೊಠಡಿಗೆ ನುಗ್ಗಿದಾಗ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಹೇಳಲಾಗಿದೆ. ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿದ್ದ ಕಾರಣ ಹರೇಂದ್ರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ, ಹರೇಂದ್ರ ಅವನ ತಂದೆ ಮತ್ತು ಸಹೋದರನೇ ಸೇರಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಅವರ ಅತ್ತೆ-ಮಾವ ಆರೋಪಿಸಿದ್ದಾರೆ.
ಈ ಆರೋಪಗಳ ನಡುವೆಯೇ ಮಕ್ಕಳೇ ಅಪ್ಪನನ್ನು ಹೊಡೆಯುತ್ತಿರುವ ವಿಡಿಯೋ ಬಹಿರಂಗವಾಗಿರುವುದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗ್ವಾಲಿಯರ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಾಲಿ ಚಂದೋರಿಯಾ ತಿಳಿಸಿದ್ದಾರೆ. ಶವಪರೀಕ್ಷೆಯು ಸಾವಿಗೆ ಕಾರಣವನ್ನು ದೃಢಪಡಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.