ಬೆಂಗಳೂರು: ಹೊಸ ವರ್ಷದಲ್ಲಿ ಟಿವಿ ಖರೀದಿಸಬೇಕು ಎಂದು ಬಯಸುತ್ತಿರುವವರಿಗೆ ಕಹಿ ಸುದ್ದಿಯೊಂದು ಕಾದಿದೆ. ಹೌದು, ಮಾರುಕಟ್ಟೆ ತಜ್ಞರ ಪ್ರಕಾರ, ಜನವರಿಯಲ್ಲಿ ದೇಶಾದ್ಯಂತ ಟಿವಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಹಾಗಾಗಿ, ಯಾರಾದರೂ ಟಿವಿ ಖರೀದಿಸಬೇಕು ಎಂದು ಪ್ಲಾನ್ ಮಾಡಿದ್ದರೆ, ಡಿಸೆಂಬರ್ ತಿಂಗಳಲ್ಲಿಯೇ ಖರೀದಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.
ಉದ್ಯಮ ವಲಯದ ಅಂದಾಜಿನ ಪ್ರಕಾರ, ಜನವರಿಯಲ್ಲಿ ಎಲ್ಇಡಿ ಟಿವಿಗಳ ಬೆಲೆಗಳು ಸುಮಾರು 3-4% ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೈಯರ್ ಅಪ್ಲೈಯನ್ಸಸ್ ಇಂಡಿಯಾ ಅಧ್ಯಕ್ಷ ಎನ್.ಎಸ್. ಸತೀಶ್ ಅವರ ಪ್ರಕಾರ, “ದೇಶೀಯವಾಗಿ ತಯಾರಾಗುತ್ತಿರುವ ಅಥವಾ ಅಸೆಂಬಲ್ ಆಗುತ್ತಿರುವ ಟಿವಿಗಳಲ್ಲಿ ಕೇವಲ 30% ರಷ್ಟು ಮಾತ್ರ ದೇಶೀಯ ಮೌಲ್ಯವರ್ಧನೆ ಆಗುತ್ತಿದೆ. ಅಲ್ಲದೆ ರೂಪಾಯಿ ಮೌಲ್ಯವೂ ಕುಸಿಯುತ್ತಿರುವ ಕಾರಣ ಟಿವಿಗಳ ಬೆಲೆಯಲ್ಲಿ ಜಾಸ್ತಿ ಆಗುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
“ಟಿವಿ ತಯಾರಿಕೆಗೆ 70% ಬಿಡಿಭಾಗಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ಡಾಲರ್ ಮೌಲ್ಯವು 90 ರೂಪಾಯಿಯ ಗಡಿಯನ್ನು ದಾಟಿರುವುದರಿಂದ, ಈ ಹೆಚ್ಚುವರಿ ಹೊರೆಯನ್ನು ಸಂಪೂರ್ಣವಾಗಿ ಕಂಪನಿಗಳು ಭರಿಸುವುದು ಕಷ್ಟವಾಗುತ್ತಿದೆ. ನಷ್ಟವನ್ನು ತೂಗಿಸಲು ಕಂಪನಿಗಳು ಟಿವಿ ಬೆಲೆಯಲ್ಲಿ ಏರಿಕೆ ಮಾಡಿದರೂ ಅಚ್ಚರಿಯಿಲ್ಲ” ಎಂದು ವಿವರಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ಜಿಎಸ್ ಟಿ ಇಳಿಕೆ ಮಾಡಿದ ಕಾರಣ, ಟಿವಿ, ವಾಷಿಂಗ್ ಮಷೀನ್ ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿತ್ತು. ಕಳೆದ ಹಬ್ಬದ ಸೀಸನ್ ನಲ್ಲಿ ಟಿವಿಗಳ ಮಾರಾಟವೂ ಜಾಸ್ತಿಯಾಗಿತ್ತು. ಆದರೆ, ಹೊಸ ವರ್ಷಕ್ಕೆ ಟಿವಿ ಖರೀದಿಸಬೇಕು ಎಂದು ನಿರ್ಧರಿಸಿದ್ದವರಿಗೆ ಈಗ ಸ್ವಲ್ಪ ಹಿನ್ನಡೆಯಾಗಿದೆ.
ಇದನ್ನೂ ಓದಿ : ಫೋನ್ ಪೇನಿಂದ ಹೊಸ ಹೂಡಿಕೆ ಯೋಜನೆ : ದಿನಕ್ಕೆ 10 ರೂಪಾಯಿ ಕೂಡ ಹೂಡಿಕೆ ಸಾಧ್ಯ



















