ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೇಸ್ಟ್ ಗೇಟ್‌ಗಳ ನಿರ್ವಹಣೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವವಾಗಿವೆ. ಪ್ರಮುಖ ಅಂಶವಾದ ಚೈನ್ ಬದಲಾವಣೆ ಕೈಗೊಳ್ಳದೆ, ಕೇವಲ ಗೇಟ್‌ಗಳ ಬದಲಾವಣೆಗೆ ಮುಂದಾಗಿದ್ದ ತುಂಗಭದ್ರಾ ಮಂಡಳಿಯ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ.
ತಜ್ಞರು ಚೈನ್‌ಗಳು ದುರ್ಬಲವಾಗಿರುವುದಾಗಿ ವರದಿ ನೀಡಿದ್ದರೂ, ಅವುಗಳನ್ನು ಬದಲಾಯಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದರ ಪರಿಣಾಮವಾಗಿ 2024ರ ಆಗಸ್ಟ್ 10ರಂದು ಗೇಟ್ ನಂ.19 ಕಿತ್ತೊಗೆಯುವ ಘಟನೆ ಸಂಭವಿಸಿತ್ತು. ಆ ವೇಳೆ ಗೇಟ್ ಹಾಗೂ ಚೈನ್‌ಗಳನ್ನು ಬದಲಾಯಿಸಲು ಸೂಚಿಸಲಾಗಿತ್ತು.
ಪ್ರಸ್ತುತ ಜಲಾಶಯದ 33 ಕ್ರೇಸ್ಟ್ ಗೇಟ್‌ಗಳ ಬದಲಾವಣೆಗೆ ಸುಮಾರು ₹54 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಚೈನ್‌ಗಳ ಬದಲಾವಣೆ ವಿಳಂಬವಾಗಿದ್ದು, ಇದೀಗ ₹5.38 ಕೋಟಿ ವೆಚ್ಚದಲ್ಲಿ 66 ಚೈನ್‌ಗಳನ್ನು ಬದಲಾಯಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಈ ಬೇಸಿಗೆ ಮುಗಿಯುವೊಳಗೆ ಚೈನ್ ಅಳವಡಿಕೆ ಪೂರ್ಣಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಚೈನ್ ಬದಲಾವಣೆ ಅತ್ಯಂತ ಪ್ರಮುಖವಾಗಿದ್ದು, ಈ ಕಾಮಗಾರಿಯ ವೇಗ ಹಾಗೂ ಗುಣಮಟ್ಟದ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕರಿಸಿದೆ.
ಇದನ್ನೂ ಓದಿ : ಕಾವೇರಿ ನೀರು ಪೋಲು ಮಾಡಿದ್ರೆ ಭಾರೀ ದಂಡ : BWSSBಯಿಂದ ಎಚ್ಚರಿಕೆ..!



















