ತುಮಕೂರು : ತುಮಕೂರು ತಾಲೂಕಿನ ಬಾಣಾವರ ರೈಸ್ ಮಿಲ್ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಟ್ಟು 9 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಸಂಭವಿಸಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ತುಮಕೂರು ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ಅವರಿಗೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಔಟ್ ಆಫ್ ಡೇಂಜರ್ ಎಂದು ತಿಳಿದುಬಂದಿದೆ. ಅವರು ಬೆಲೆನೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದರು. ಇದೇ ವೇಳೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲೀಸ್ ಕಾರು ಎದುರಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹೆಬ್ಬೂರು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕ್ಯಾತಸಂದ್ರ ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು–ಕುಣಿಗಲ್ ರಸ್ತೆಯ ಬಾಣಾವರದ ಬಳಿ ಈ ಅಪಘಾತ ಸಂಭವಿಸಿದ್ದು, ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೊಪ್ಪಳ | ಸ್ಪಿರಿಟ್ ಸೇವಿಸಿ ಇಬ್ಬರು ಯುವಕರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ



















