ತುಮಕೂರು : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಜಾತ್ರೆಯಲ್ಲಿ ಕಿಡ್ನಾಪ್ ಆಗಿದ್ದ ಎರಡು ವರ್ಷದ ಗಂಡು ಮಗು ಯುವರಾಜ್ ಅನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಜಾತ್ರೆಯ ವೇಳೆ ಅಜ್ಜಿ-ತಾತನ ಜೊತೆ ಇದ್ದ ಮಗುವನ್ನು ಅಪಹರಿಸಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಶಿರಾ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನ ಆಧರಿಸಿ ಕಿಡ್ನಾಪರ್‌ಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಿದರು.
ಸಿಸಿ ಕ್ಯಾಮೆರಾದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದ ಮಹಿಳೆ ಹಾಗೂ ಪುರುಷರ ಚಲನೆ, ಅವರು ಹತ್ತಿದ ಬಸ್, ಇಳಿದ ಸ್ಥಳ ಸೇರಿದಂತೆ ಪ್ರತಿಯೊಂದು ವಿವರವನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಕಿಡ್ನಾಪ್ ಮಾಡಿದ ಆರೋಪಿಗಳು ಮಗುವನ್ನು ನೇರವಾಗಿ ಬೆಂಗಳೂರಿನ ಕೋರಮಂಗಲಕ್ಕೆ ಸ್ಥಳಾಂತರಿಸಿದ್ದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ. ಶಾಂತಮೇರಿ ಹಾಗೂ ನರಸಯ್ಯ ಎಂಬುವವರು ಈ ಕೃತ್ಯ ಎಸಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಾಂತಮೇರಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳು ಇದ್ದು, ಗಂಡು ಮಗು ಬೇಕೆಂಬ ಉದ್ದೇಶದಿಂದ ಈ ಅಪಹರಣ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ತಮ್ಮ ಮಗ ಸಿಗುತ್ತಾನೋ ಇಲ್ಲವೋ ಎಂಬ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದ ರಂಗಯ್ಯ ಹಾಗೂ ಸೌಮ್ಯ ದಂಪತಿಗೆ ಪೊಲೀಸರು ಮಗುವನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ : ವಿಜಯಪುರ | ಮುಸ್ಲಿಂ ಯುವಕನೊಂದಿಗೆ ಓಡಿ ಹೋದ ಮಗಳಿಗಾಗಿ ತಂದೆ-ತಾಯಿ ಕಣ್ಣೀರು



















