ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಸ್ವಲ್ಪದರಲ್ಲೇ ಚಿನ್ನ ಕೈ ತಪ್ಪಿದ್ದು, ಬೆಳ್ಳಿ ಧಕ್ಕಿದೆ.
ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ ಯು5 ಈವೆಂಟ್ ನಲ್ಲಿ ಭಾರತದ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕ ಗೆದ್ದಿದ್ದಾರೆ. ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಚೀನಾದ ಕ್ಯು ಕ್ಸಿಯಾ ಯಾಂಗ್ ವಿರುದ್ಧ 0-2 (17-21, 10-21) ರಿಂದ ಸೋತು ಬೆಳ್ಳಿ ಗೆದ್ದರು. ಮಹಿಳೆಯರ SU5 ವಿಭಾಗದಲ್ಲಿ ಚೊಚ್ಚಲ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ತುಳಸಿಮತಿ ಮುರುಗೇಶನ್ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪದಕಗಳ ಸಂಖ್ಯೆ ಎರಡಂಕಿ ದಾಟಿದೆ.
ತುಳಸಿಮತಿ ಮುರುಗೇಶನ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಬೇಕಾಗಿ ಬಂದರೂ ಈ ಪಂದ್ಯ ಅವರಿಗೆ ಹಾಗೂ ಇಡೀ ದೇಶಕ್ಕೆ ವಿಶೇಷವಾಗಿದೆ. ಈ ಮೊದಲು ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಯಾವುದೇ ಮಹಿಳಾ ಆಟಗಾರ್ತಿ ಪದಕ ಗೆದ್ದಿರಲಿಲ್ಲ. ಚೀನಾದ ಯಾಂಗ್ ಕ್ಯು ಜಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತುಳಸಿಮತಿ ಮುರುಗೇಶನ್ ಉತ್ತಮ ಆರಂಭ ನೀಡಿದರೂ ಲಯ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.
ಪ್ಯಾರಾ ಬ್ಯಾಡ್ಮಿಂಟನ್ ನ ಮಹಿಳೆಯರ SU5 ವಿಭಾಗದಲ್ಲಿ ಮನೀಶಾ ರಾಮದಾಸ್ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಮನೀಶಾ ರಾಮದಾಸ್ ಇದೇ ತುಳಸಿಮತಿ ಮುರುಗೇಶನ್ ವಿರುದ್ಧ ಸೋತಿದ್ದರು. ಹೀಗಾಗಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮನೀಶಾ ರಾಮದಾಸ್, ಡೆನ್ಮಾರ್ಕ್ನ ಕ್ಯಾಥರೀನ್ ರೋಸೆಂಗ್ರೆನ್ ಅವರನ್ನು ಏಕಪಕ್ಷೀಯವಾಗಿ ಸೋಲಿಸಿ ಕಂಚು ಗೆದ್ದಿದ್ದಾರೆ.
ಪ್ರಸಕ್ತ ಸಾಲಿನ ಕ್ರೀಡಾಕುಟದಲ್ಲಿ ಭಾರತ ಇಲ್ಲಿಯವರೆಗೆ 11 ಪದಕಗಳನ್ನು ಗೆದ್ದಿದೆ. 2 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಇಲ್ಲಿಯವರೆಗೆ ಭಾರತೀಯ ಆಟಗಾರರು ಗೆದ್ದಿದ್ದಾರೆ.