ಮಾಸ್ಕೋ/ಟೋಕಿಯೋ: ಇಂದು ಬೆಳ್ಳಂಬೆಳಗ್ಗೆ ರಷ್ಯಾದ ಪೂರ್ವ ಭಾಗದ ಕಾಮ್ಚಟ್ಕಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಉತ್ತರ ಪೆಸಿಫಿಕ್ ಪ್ರದೇಶದಾದ್ಯಂತ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಪ್ರಬಲ ಕಂಪನದ ನಂತರ ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್‌ನ ಹೊಕ್ಕೈಡೋ ದ್ವೀಪಗಳಲ್ಲಿ 30 ಸೆಂ.ಮೀ. ಎತ್ತರದ ಸುನಾಮಿ ತರಂಗಗಳು ಕಾಣಿಸಿಕೊಂಡಿದ್ದು, ಕರಾವಳಿ ಪ್ರದೇಶಗಳಲ್ಲಿ ಭಾರಿ ಎಚ್ಚರಿಕೆ ವಹಿಸಲಾಗಿದೆ. 2011ರ ಬಳಿಕ ಸಂಭವಿಸಿದ ಅತಿ ಪ್ರಬಲ ಭೂಕಂಪ ಎಂದು ಇದನ್ನು ಬಣ್ಣಿಸಲಾಗಿದೆ.
ಭೂಕಂಪದ ತೀವ್ರತೆಯು ಹಲವಾರು ಪ್ರದೇಶಗಳಲ್ಲಿ ವ್ಯಾಪಕ ಪರಿಣಾಮಗಳನ್ನು ಬೀರಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೊಬೈಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ರಷ್ಯಾದ ಪ್ರಮುಖ ನಗರವಾದ ಪೆಟ್ರೊಪಾವ್ಲೋವ್ಸ್ಕ್-ಕಾಮ್ಚಟ್ಸ್ಕಿಯಲ್ಲಿ ಜನರು ಭಯಭೀತರಾಗಿ ಬೀದಿಗಳಿಗೆ ಧಾವಿಸಿದ್ದೂ ಕಂಡುಬಂದಿದೆ.
ಮತ್ತಷ್ಟು ದಟ್ಟ ಸುನಾಮಿ ಅಲೆಗಳು ಏಳುವ ಭೀತಿಯಿದ್ದು, ಕುರಿಲ್ ದ್ವೀಪಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಆಡಳಿತಗಳು ತಿಳಿಸಿವೆ. ಸಾಖಾಲಿನ್ ದ್ವೀಪದಲ್ಲೂ ಪ್ರವಾಸಿಗರು ಮತ್ತು ನಿವಾಸಿಗಳಿಗೆ ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಸುನಾಮಿ ಎಚ್ಚರಿಕೆ
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ನೀಡಿದ ಮಾಹಿತಿಯ ಪ್ರಕಾರ, ಹವಾಯಿ, ಚಿಲಿ, ಜಪಾನ್ ಮತ್ತು ಸೊಲೊಮನ್ ದ್ವೀಪಗಳಲ್ಲಿ 1 ರಿಂದ 3 ಮೀಟರ್ ಎತ್ತರದ ಸುನಾಮಿ ತರಂಗಗಳು ಅಪ್ಪಳಿಸುವ ಸಾಧ್ಯತೆಯಿದೆ.
ಅಮೆರಿಕದ ಅಲಾಸ್ಕಾದಲ್ಲಿರುವ ಪ್ರಮುಖ ಕರಾವಳಿ ಪ್ರವಾಸಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ಪ್ರಕಟಿಸಲಾಗಿದೆ. ಅಲ್ಲದೆ, ಅಮೆರಿಕದ ಪಶ್ಚಿಮ ಕರಾವಳಿಯ ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ರಾಜ್ಯಗಳ ಕೆಲವು ಭಾಗಗಳಿಗೂ ಜಾಗ್ರತಾ ಸೂಚನೆ ನೀಡಲಾಗಿದೆ.
ನ್ಯೂಜಿಲೆಂಡ್ ಅಧಿಕಾರಿಗಳು ತಮ್ಮ ಕರಾವಳಿ ಪ್ರದೇಶಗಳಿಗೆ “ಬಲಶಾಲಿ ಹಾಗೂ ಅಸಾಮಾನ್ಯ ಪ್ರವಾಹಗಳು” ಬರಬಹುದೆಂದು ಎಚ್ಚರಿಕೆ ನೀಡಿದ್ದು, ಕಡಲತೀರಗಳು ಮತ್ತು ಬಂದರು ಪ್ರದೇಶಗಳಿಂದ ದೂರವಿರಲು ಜನರಿಗೆ ಸೂಚಿಸಲಾಗಿದೆ.
2011ರ ನಂತರದ ಭೀಕರ ದುರಂತ
ಈ ಭೂಕಂಪವು ಇತ್ತೀಚಿನ ವರ್ಷಗಳಲ್ಲಿ ಪೆಸಿಫಿಕ್ ಪ್ರದೇಶದಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪಗಳಲ್ಲಿ ಒಂದಾಗಿದೆ. 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ವಿನಾಶಕಾರಿ ಭೂಕಂಪದ ನಂತರ ಸಂಭವಿಸಿದ ಎರಡನೇ ಅತಿದೊಡ್ಡ ಭೂಕಂಪ ಇದಾಗಿದೆ. ಇದಕ್ಕೂ ಮೊದಲು, 1952ರಲ್ಲಿ ಇದೇ ಕಾಮ್ಚಟ್ಕಾ ಪ್ರದೇಶದಲ್ಲಿ 9.0 ತೀವ್ರತೆಯ ಬೃಹತ್ ಭೂಕಂಪ ಸಂಭವಿಸಿತ್ತು.
ಈ ಘಟನೆಯು “ಪೆಸಿಫಿಕ್ ರಿಂಗ್ ಆಫ್ ಫೈರ್” ನಲ್ಲಿ ನೆಲೆಸಿರುವ ದೇಶಗಳಲ್ಲಿ ಭೂಕಂಪ ಮತ್ತು ಸುನಾಮಿಯ ಭೀತಿಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಎಲ್ಲರೂ ಎಚ್ಚರಿಕೆಯಿಂದಿದ್ದು, ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.