ಇತ್ತೀಚೆಗೆ ದೇಶದಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ನಡೆಯುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿವೆ. ಇಂತಹ ಘಟನೆಯೊಂದು ಮಂಗಳೂರು ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಆಗಂತುಕರು ಜಲ್ಲಿ ಕಲ್ಲುಗಳನ್ನು ಸುರಿದಿರುವ ಕುರಿತು ಮಾಹಿತಿ ಸಿಕ್ಕಿದೆ. ಹೀಗಾಗಿ ಚಲಿಸುವ ಸಂದರ್ಭದಲ್ಲಿ ದೊಡ್ಡ ಸದ್ದು ಕೇಳಿ ಸ್ಥಳೀಯರಿಗೆ ಆತಂಕ ಉಂಟಾಗಿತ್ತು. ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಘಟನೆ ನಡೆದಿದೆ. ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಶಬ್ದ ಕೇಳಿಸಿದೆ. ನಂತರ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಸ್ಥಳೀಯರು ಭೂಕಂಪವಾಗಿರಬಹುದು ಎಂದು ಜನ ಭಾವಿಸಿದ್ದರು.
ಆನಂತರ ಪರಿಶೀಲನ ನಡೆಸಿದಾಗ ಹಳಿ ಮೇಲೆ ಜಲ್ಲಿ ಕಲ್ಲುಗಳನ್ನು ಸುರಿದಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಲಾಗಿದೆ.
ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ. ಇದರ ಬೆನ್ನಲ್ಲೇ ದೇಶದ ಹಲವೆಡೆ ಇಂತಹ ಘಟನೆಗಳು ನಡೆಯುತ್ತಿವೆ. ಹೀಗಾಗಿ ಎನ್.ಐ.ಎ ಮತ್ತು ಭಯೋತ್ಪಾದಕ ನಿಗ್ರಹ ದಳ ತನಿಖೆ ನಡೆಸುತ್ತಿದೆ.