ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರಿರುವ ವ್ಯಾಪಾರ ಯುದ್ಧ ಹಾಗೂ ಪ್ರತಿ ಸುಂಕವನ್ನು ಭಾರತ, ಚೀನಾ ಸೇರಿದಂತೆ ಹಲವು ದೇಶಗಳು ಮೊದಲೇ ನಿರೀಕ್ಷಿಸಿದ್ದವು. ಟ್ರಂಪ್ ಶ್ವೇತಭವನದ ಗುಲಾಬಿ ತೋಟಕ್ಕೆ ಬಂದು “ವಿಮೋಚನಾ ದಿನದ ಸುಂಕ”ಗಳನ್ನು ಘೋಷಿಸುತ್ತಿದ್ದಂತೆಯೇ ಅನೇಕ ದೇಶಗಳು ಸುಂಕವನ್ನು ಎದುರಿಸಲು ಸಜ್ಜಾಗಿ ನಿಂತಿದ್ದವು. ಆದರೆ, ಜನವಸತಿಯೇ ಇಲ್ಲದ ದ್ವೀಪವೊಂದರ ಮೇಲೂ ಟ್ರಂಪ್ ತಮ್ಮ ಸಿಟ್ಟನ್ನು ಪ್ರದರ್ಶಿಸುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ!
ಹೌದು, ಅಚ್ಚರಿ ಹಾಗೂ ಅನಿರೀಕ್ಷಿತ ಎಂಬಂತೆ, ಅಂಟಾರ್ಕ್ಟಿಕಾ ಬಳಿಯ ಹರ್ಡ್ ಮತ್ತು ಮ್ಯಾಕ್ ಡೊನಾಲ್ಡ್ ದ್ವೀಪಗಳ ಮೇಲೂ ಟ್ರಂಪ್ ಸುಂಕ ವಿಧಿಸಿದ್ದಾರೆ. ವಿಶೇಷವೆಂದರೆ, ಈ ದ್ವೀಪಗಳಲ್ಲಿ ಜನರೇ ಇಲ್ಲ! ಇಲ್ಲಿರುವುದು ಕೇವಲ ಹಿಮನದಿಗಳು ಮತ್ತು ಪೆಂಗ್ವಿನ್‌ಗಳು.
ಹರ್ಡ್ ದ್ವೀಪ ಮತ್ತು ಆಸ್ಟ್ರೇಲಿಯಾದ ಬಾಹ್ಯ ಪ್ರದೇಶವಾದ ಮ್ಯಾಕ್ ಡೊನಾಲ್ಡ್ ದ್ವೀಪಗಳು ಭೂಮಿಯ ಮೇಲಿನ ಅತ್ಯಂತ ಏಕಾಂಗಿ ಸ್ಥಳಗಳೆಂಬ ಖ್ಯಾತಿ ಪಡೆದಿವೆ. ಈ ದ್ವೀಪಗಳನ್ನು ತಲುಪಬೇಕೆಂದರೆ ಪರ್ತ್ ನಿಂದ 2 ವಾರಗಳ ಕಠಿಣ ದೋಣಿ ಪ್ರಯಾಣ ನಡೆಸಬೇಕು. ಸುಮಾರು ಒಂದು ದಶಕದಲ್ಲಿ ಯಾವುದೇ ಮನುಷ್ಯ ಅಲ್ಲಿಗೆ ಕಾಲಿಟ್ಟಿಲ್ಲ.
ಈ ದ್ವೀಪಗಳಿಗೂ ಸುಂಕ ಹೇರಿರುವ ಟ್ರಂಪ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಈ ಭೂಮಿಯ ಮೇಲೆ ಎಲ್ಲಿಯೂ ಯಾರೂ ಸುರಕ್ಷಿತವಲ್ಲ” ಎಂದು ಹೇಳಿದ್ದಾರೆ.
ಟ್ರಂಪ್ ಆಡಳಿತದ ಸುಂಕಗಳಿಗೆ ಅರ್ಥವೇ ಇಲ್ಲ. ಅವು ನಮ್ಮ ಎರಡು ರಾಷ್ಟ್ರಗಳ ಪಾಲುದಾರಿಕೆಗೂ ವಿರುದ್ಧವಾಗಿವೆ. ಮಿತ್ರನೊಬ್ಬ ಮಾಡುವಂಥ ಕೆಲಸ ಇದಲ್ಲ ಎಂದೂ ಅಲ್ಬನೀಸ್ ಹೇಳಿದ್ದಾರೆ. ಜೊತೆಗೆ, ನಾವು ಅಮೆರಿಕದ ವಿರುದ್ಧ ಪ್ರತಿ ಸುಂಕ ವಿಧಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. “ಬೆಲೆ ಏರಿಕೆ ಮತ್ತು ನಿಧಾನಗತಿಯ ಅಭಿವೃದ್ಧಿಗೆ ಕಾರಣವಾಗುವಂಥ ಕೀಳುಮಟ್ಟದ ರೇಸ್‌ಗೆ ನಾವು ಸೇರುವುದಿಲ್ಲ” ಎಂದಿದ್ದಾರೆ. ಇದೇ ವೇಳೆ, ಈ ದ್ವೀಪಗಳು ಆಸ್ಟ್ರೇಲಿಯಾದ ವ್ಯಾಪ್ತಿಗೆ ಬರುವ ಕಾರಣವೇ ಅವುಗಳಿಗೆ ಶೇ.10ರಷ್ಟು ಸುಂಕ ವಿಧಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಯಾವುದೀ ದ್ವೀಪ?
ಪಶ್ಚಿಮ ಆಸ್ಟ್ರೇಲಿಯಾದ ಫ್ರೀಮ್ಯಾಂಟಲ್ ನಿಂದ ಹಡಗಿನ ಮೂಲಕ ಹರ್ಡ್ ದ್ವೀಪವನ್ನು ತಲುಪಲು ಸುಮಾರು 10 ದಿನಗಳು ಬೇಕಾಗುತ್ತದೆ. ಅದೂ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿದೆ. ದ್ವೀಪವು ಪೆಂಗ್ವಿನ್ ಗಳು, ಸೀಲ್ ಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳ ವಾಸಸ್ಥಾನವಾಗಿದೆ. ಈ ಪೈಕಿ ಕೆಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂರಕ್ಷಣಾ ಸ್ಥಾನಮಾನವನ್ನು ಹೊಂದಿವೆ.
ಹರ್ಡ್, ಮ್ಯಾಕ್ ಡೊನಾಲ್ಡ್ ದ್ವೀಪಗಳಲ್ಲದೇ ಆಸ್ಟ್ರೇಲಿಯಾದ ಬಾಹ್ಯ ಭೂಪ್ರದೇಶಗಳಾದ ಕೋಕೋಸ್ ದ್ವೀಪಗಳು, ಕ್ರಿಸ್ಮಸ್ ದ್ವೀಪ ಮತ್ತು ನಾರ್ ಫೋಕ್ ದ್ವೀಪದ ಮೇಲೂ ಅಮೆರಿಕ ಸುಂಕ ವಿಧಿಸಿದೆ.