ವಾಷಿಂಗ್ಟನ್: ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿರುವ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತವು ಮರ್ಮಾಘಾತ ನೀಡಿದೆ. ದಶಕಗಳಿಂದ ಜಾರಿಯಲ್ಲಿದ್ದ ಎಚ್-1ಬಿ ವೀಸಾ ‘ಲಾಟರಿ ವ್ಯವಸ್ಥೆ’ಯನ್ನು ರದ್ದುಗೊಳಿಸಲು ಅಮೆರಿಕ ಸರ್ಕಾರ ನಿರ್ಧರಿಸಿದ್ದು, ಇದು ಭಾರತೀಯ ಟೆಕ್ಕಿಗಳ ಪಾಲಿಗೆ ಅಮೆರಿಕದ ಬಾಗಿಲು ಮುಚ್ಚಿದಂತಾಗಿದೆ.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಈ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, ಇನ್ನು ಮುಂದೆ ‘ಅದೃಷ್ಟ’ದ ಆಧಾರದ ಮೇಲೆ ವೀಸಾ ಸಿಗುವುದಿಲ್ಲ. ಬದಲಿಗೆ, ಯಾರು ಹೆಚ್ಚು ಸಂಬಳ ಪಡೆಯುತ್ತಾರೋ ಮತ್ತು ಯಾರು ಹೆಚ್ಚು ಕೌಶಲ್ಯ ಹೊಂದಿದ್ದಾರೋ ಅವರಿಗೆ ಮಾತ್ರ ಮಣೆ ಹಾಕಲಾಗುವುದು.
ಹೊಸ ನಿಯಮ ಏನು ಹೇಳುತ್ತದೆ?
ಲಾಟರಿ ರದ್ದು: ಇದುವರೆಗೂ ಎಚ್-1ಬಿ ವೀಸಾಗಳನ್ನು ಕಂಪ್ಯೂಟರ್ ಚಾಲಿತ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಇದನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.
ವೇತನ ಮತ್ತು ಕೌಶಲ್ಯಕ್ಕೆ ಆದ್ಯತೆ: ಹೊಸ ‘ವೇಯ್ಟೆಡ್ ಸೆಲೆಕ್ಷನ್ ಸಿಸ್ಟಮ್’ (Weighted Selection System) ಅಡಿಯಲ್ಲಿ, ಅತಿ ಹೆಚ್ಚು ವೇತನ ಪಡೆಯುವ ಮತ್ತು ವಿಶೇಷ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಫೆಬ್ರವರಿ 2026ರಿಂದ ಜಾರಿ: ಈ ಹೊಸ ನಿಯಮವು ಫೆಬ್ರವರಿ 27, 2026 ರಿಂದ ಜಾರಿಗೆ ಬರಲಿದ್ದು, ಮುಂಬರುವ ಎಚ್-1ಬಿ ನೋಂದಣಿ ಪ್ರಕ್ರಿಯೆಗೆ ಅನ್ವಯವಾಗಲಿದೆ.
ಭಾರತೀಯರಿಗೇ ಏಕೆ ಆತಂಕ?
ಪ್ರಸ್ತುತ ಪ್ರತಿ ವರ್ಷ ವಿತರಿಸಲಾಗುವ ಒಟ್ಟು ಎಚ್-1ಬಿ ವೀಸಾಗಳಲ್ಲಿ ಶೇ.70ರಷ್ಟು ವೀಸಾಗಳನ್ನು ಭಾರತೀಯರೇ ಪಡೆಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಟೆಕ್ನಾಲಜಿ, ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಮಧ್ಯಮ ಹಂತದ ವೇತನಕ್ಕೆ ಕೆಲಸ ಮಾಡುವವರು. ಹೊಸ ನಿಯಮದಿಂದಾಗಿ, ಆರಂಭಿಕ ಹಂತದ ಇಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಉದ್ಯೋಗಿಗಳಿಗೆ ವೀಸಾ ಸಿಗುವುದು ಕನಸಿನ ಮಾತಾಗಲಿದೆ.
ಟ್ರಂಪ್ ಸರ್ಕಾರದ ವಾದವೇನು?
“ಹಳೆಯ ಲಾಟರಿ ವ್ಯವಸ್ಥೆಯನ್ನು ಕೆಲವು ಕಂಪನಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದವು. ಕಡಿಮೆ ಸಂಬಳಕ್ಕೆ ವಿದೇಶಿ ಉದ್ಯೋಗಿಗಳನ್ನು ಕರೆತಂದು, ಅಮೆರಿಕದ ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿತ್ತು. ಈ ಶೋಷಣೆಯನ್ನು ತಪ್ಪಿಸಲು ಮತ್ತು ಅಮೆರಿಕನ್ನರ ಹಿತಾಸಕ್ತಿ ಕಾಪಾಡಲು ಈ ಬದಲಾವಣೆ ತರಲಾಗಿದೆ,” ಎಂದು ಅಮೆರಿಕದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಮತ್ತಷ್ಟು ಬಿಗಿ ಕ್ರಮಗಳು:
ವೀಸಾ ಆಯ್ಕೆ ಪ್ರಕ್ರಿಯೆ ಬದಲಾವಣೆ ಒಂದೇ ಅಲ್ಲದೇ, ಹೊಸ ಎಚ್-1ಬಿ ಅರ್ಜಿಗಳಿಗೆ ಬರೋಬ್ಬರಿ 1 ಲಕ್ಷ ಡಾಲರ್ (ಸುಮಾರು 84 ಲಕ್ಷ ರೂ.) ಶುಲ್ಕ ವಿಧಿಸುವುದು ಮತ್ತು ಅರ್ಜಿದಾರರ ಸೋಶಿಯಲ್ ಮೀಡಿಯಾ ಪರಿಶೀಲನೆಯನ್ನು ಕಠಿಣಗೊಳಿಸುವಂತಹ ಕ್ರಮಗಳನ್ನೂ ಟ್ರಂಪ್ ಆಡಳಿತ ಜಾರಿಗೆ ತಂದಿದೆ. ಇದರಿಂದಾಗಿ ಭಾರತದ ಐಟಿ ಪ್ರತಿಭೆಗಳು ಕೆನಡಾ ಅಥವಾ ಯುರೋಪ್‌ನತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ : ಬಾಹ್ಯಾಕಾಶದಲ್ಲಿ ಇಸ್ರೋ ‘ಬಾಹುಬಲಿ’ ಘರ್ಜನೆ : ಅತ್ಯಂತ ಭಾರದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಎಲ್‌ವಿಎಂ-3 ರಾಕೆಟ್!



















