ವಾಷಿಂಗ್ಟನ್ : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಸಮರ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಇರಾನ್ ವಶದಲ್ಲಿದೆ ಎನ್ನಲಾದ ಸುಮಾರು 400 ಕೆ.ಜಿ. ಅತ್ಯಂತ ಅಪಾಯಕಾರಿ ‘ಸಂವರ್ಧಿತ ಯುರೇನಿಯಂ’ ಅನ್ನು ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭೂಸೇನಾ ಕಾರ್ಯಾಚರಣೆಯ ಸಾಹಸಕ್ಕೆ ಕೈಹಾಕಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಶಮನಗೊಳಿಸಲು ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯುತ್ತಿರುವಂತೆಯೇ, ಟ್ರಂಪ್ ಮಾತ್ರ ಇರಾನ್ ಮೇಲೆ ಕಠಿಣ ನಿಲುವು ತಳೆದಿದ್ದಾರೆ. “ಇರಾನ್ ತನ್ನ ಪರಮಾಣು ಸಾಮಗ್ರಿಯನ್ನು ತಾನಾಗಿಯೇ ಒಪ್ಪಿಸಬೇಕು, ಇಲ್ಲವಾದರೆ ಬಲಪ್ರಯೋಗದ ಮೂಲಕ ನಾವು ಅದನ್ನು ಕಿತ್ತುಕೊಳ್ಳುತ್ತೇವೆ” ಎಂದು ಟ್ರಂಪ್ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಭಾನುವಾರ ರಾತ್ರಿ ಮಾತನಾಡಿದ್ದ ಅವರು, “ಅವರು ನಮಗೆ ಆ ಪರಮಾಣು ಧೂಳನ್ನು (Nuclear Dust) ನೀಡಲೇಬೇಕು, ಇಲ್ಲದಿದ್ದರೆ ಅವರಿಗೆ ದೇಶವೇ ಉಳಿಯುವುದಿಲ್ಲ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಪರ್ವತದಡಿ ಅಡಗಿದೆಯಾ ಪರಮಾಣು ನಿಧಿ?
ಕಳೆದ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೂ ಮುನ್ನ, ಇರಾನ್ ಬಳಿ ಶೇ.60ರಷ್ಟು ಸಂವರ್ಧಿತವಾದ 400 ಕೆಜಿ ಯುರೇನಿಯಂ ಮತ್ತು ಶೇ.20ರಷ್ಟು ಸಂವರ್ಧಿತವಾದ 200 ಕೆಜಿ ಯುರೇನಿಯಂ ಇತ್ತು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈ ಅಮೂಲ್ಯ ಮತ್ತು ಅಪಾಯಕಾರಿ ವಸ್ತುಗಳು ಇಸ್ಫಹಾನ್ ಮತ್ತು ನಟಾನ್ಜ್ ಭಾಗದ ಭೂಗತ ಸುರಂಗಗಳಲ್ಲಿ ಅಥವಾ ಅಮೆರಿಕದ ಬಾಂಬ್ ದಾಳಿಯಿಂದ ಧ್ವಂಸಗೊಂಡ ಪರ್ವತಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗಿರಬಹುದು ಎಂದು ಶಂಕಿಸಲಾಗಿದೆ. ಇದನ್ನು ಹೊರತೆಗೆಯುವುದು ಅಮೆರಿಕದ ಈಗಿನ ಪ್ರಮುಖ ಗುರಿಯಾಗಿದೆ.
ಅಪಾಯದ ಹಾದಿಯಲ್ಲಿ ಅಮೆರಿಕದ ‘ಬೂಟ್ಸ್’
ಈ ಕಾರ್ಯಾಚರಣೆ ಅಂದುಕೊಂಡಷ್ಟು ಸುಲಭವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇರಾನ್‌ನ ಒಳಭಾಗಕ್ಕೆ ನುಗ್ಗಿ ಯುರೇನಿಯಂ ಸಿಲಿಂಡರ್‌ಗಳನ್ನು ಹೊರತೆಗೆಯಲು ಕನಿಷ್ಠ 10,000 ಹೆಚ್ಚುವರಿ ಸೈನಿಕರ ಅಗತ್ಯವಿದೆ. ಈಗಾಗಲೇ 3,500 ಸೈನಿಕರು ಮಧ್ಯಪ್ರಾಚ್ಯಕ್ಕೆ ತಲುಪಿದ್ದಾರೆ. ಶತ್ರುಗಳ ಕ್ಷಿಪಣಿ ದಾಳಿಯ ನಡುವೆ ಅವಶೇಷಗಳನ್ನು ಅಗೆದು, ಗಣಿಗಳನ್ನು ತೆರವುಗೊಳಿಸಿ, ವಿಶೇಷ ಸಿಲಿಂಡರ್‌ಗಳಲ್ಲಿ ಯುರೇನಿಯಂ ತುಂಬಿಸಿ ಸಾಗಿಸುವುದು ಒಂದು ವಾರದ ಸುದೀರ್ಘ ಪ್ರಕ್ರಿಯೆಯಾಗಿದೆ. ಇದಕ್ಕೆ ದೊಡ್ಡ ಮಟ್ಟದ ಪ್ರಾಣಹಾನಿಯ ಭೀತಿಯೂ ಇದೆ.
ಆಡಳಿತ ಮಂಡಳಿಯಲ್ಲಿ ಭಿನ್ನಮತ?
ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಟ್ರಂಪ್ ಆಡಳಿತದಲ್ಲೇ ಭಿನ್ನಾಭಿಪ್ರಾಯಗಳು ಮೂಡಿವೆ. ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಇರಾನ್ ವಿಷಯದಲ್ಲಿ ಸ್ವಲ್ಪ ‘ಮೃದು ಧೋರಣೆ’ ಹೊಂದಿದ್ದಾರೆ ಎಂದು ಸ್ವತಃ ಟ್ರಂಪ್ ಒಪ್ಪಿಕೊಂಡಿದ್ದಾರೆ. ಇತ್ತ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಕೂಡ ಯುದ್ಧದ ಆರ್ಥಿಕ ಹೊರೆಯ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಮುಂಬರುವ ಮಧ್ಯಂತರ ಚುನಾವಣೆಯ ಹೊತ್ತಿಗೆ ಈ ಯುದ್ಧವನ್ನು ಮುಗಿಸಿ ವಿಜಯಶಾಲಿಯಾಗಿ ಹೊರಹೊಮ್ಮಬೇಕೆಂಬ ಹಠಕ್ಕೆ ಟ್ರಂಪ್ ಬಿದ್ದಂತಿದೆ. ಒಟ್ಟಾರೆಯಾಗಿ, ಏಪ್ರಿಲ್ ಮಧ್ಯದ ವೇಳೆಗೆ ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡಲು ಬಯಸಿರುವ ಟ್ರಂಪ್, ‘ಪರಮಾಣು ಮುಕ್ತ ಇರಾನ್’ ಎಂಬ ತಮ್ಮ ಭರವಸೆಯನ್ನು ಈಡೇರಿಸಲು ಎಂತಹ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕರ್ತವ್ಯದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ದುರ್ಮರಣ!



















