ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಹಲವು ಹಗರಣಗಳನ್ನು ಆರೋಪ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಲು ವಿರೋಧ ಪಕ್ಷಗಳು ಮುಂದಾಗಿವೆ. ಇದರ ಬೆನ್ನಲ್ಲೇ ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ಪಕ್ಷದ ವರ್ಚಸ್ಸು ತೋರಿಸುವುದಕ್ಕಾಗಿ ಟಗರು ಕಹಳೆ ಊದಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತರು ರಾಜಕೀಯ ಸಮಾವೇಶ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೂ ದೇವೇಗೌಡರ ಕರ್ಮಭೂಮಿಯಲ್ಲೇ ಈ ಕಹಳೆ ಊದಲು ಮುಂದಾಗಿದ್ದಾರೆ. ತುಮಕೂರು ಹಾಗೂ ಹಾಸನದಲ್ಲಿ ಈ ಸಮಾವೇಶಗಳು ನಡೆಯಲಿವೆ ಎನ್ನಲಾಗಿದ್ದು, ಡಿಸೆಂಬರ್ 2 ರಂದು ತುಮಕೂರು ಹಾಗೂ ಡಿಸೆಂಬರ್ 5 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಕೂಡ ನಡೆಯುತ್ತಿದೆ. ಈ ಸಮಾವೇಶದ ಮೂಲಕ ಪಕ್ಷದ ವರ್ಚಸ್ಸು ಹಾಗೂ ಬಲವನ್ನು ವಿರೋಧಿಗಳಿಗೆ ತೋರಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ 40 ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಯಾವ ಹಗರಣವೂ ಅಂಟಿಕೊಂಡಿರಲಿಲ್ಲ. ಆದರೆ, ಬಿಜೆಪಿ ಈಗ ಮುಡಾ ಆರೋಪ ಮಾಡುತ್ತಿದೆ. ಇದರಿಂದ ಸಿಎಂ ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೃಹತ್ ಸಮಾವೇಶ ನಡೆಸಿ, ಮತ್ತೆ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ 75 ನೇ ವರ್ಷದ ಹುಟ್ಟುಹಬ್ಬದ ವೇಳೆ ಕೂಡ ಬೃಹತ್ ಸಮಾವೇಶ ನಡೆಸಿದ್ದರು. ಈ ವೇಳೆ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸಿದ್ದರು. ಅದೇ ಮಾದರಿಯಲ್ಲೇ ಹಾಸನದಲ್ಲಿ ಡಿಸೆಂಬರ್ 5 ರಂದು ಕಾರ್ಯಕರ್ತರು, ಅಭಿಮಾನಿಗಳನ್ನು ಸೇರಿಸಲು ಕಾಂಗ್ರೆಸ್ ಮುಂದಾಗಿದೆ.