ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಬ್ರಿಕ್ಸ್ ಒಕ್ಕೂಟದ “ಅಮೆರಿಕ ವಿರೋಧಿ ನೀತಿಗಳನ್ನು” ಬೆಂಬಲಿಸುವ ದೇಶಕ್ಕೆ ಹೆಚ್ಚುವರಿ ಶೇ.10ರಷ್ಟು ಸುಂಕ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬ್ರಿಕ್ಸ್ ದೇಶಗಳ ನಾಯಕರು ಬ್ರೆಜಿಲ್‌ನಲ್ಲಿ ನಡೆದ ಶೃಂಗದ ಬಳಿಕ “ರಿಯೊ ಡಿ ಜನೈರೊ ನಿರ್ಣಯ”ಗಳನ್ನು ಬಿಡುಗಡೆ ಮಾಡಿ, ಅಮೆರಿಕದ ಸುಂಕ ನೀತಿಗಳನ್ನು ಟೀಕಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರಿಂದ ಈ ಎಚ್ಚರಿಕೆ ಸಂದೇಶ ಹೊರಬಿದ್ದಿದೆ. ಆದಾಗ್ಯೂ, ಬ್ರಿಕ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಅಥವಾ ಅಮೆರಿಕವನ್ನು ನೇರವಾಗಿ ಎಲ್ಲೂ ಹೆಸರಿಸಿರಲಿಲ್ಲ.
ತಮ್ಮ ‘ಟ್ರೂತ್ ಸೋಷಿಯಲ್’ ಪೋಸ್ಟ್‌ನಲ್ಲಿ, ಟ್ರಂಪ್, “ಬ್ರಿಕ್ಸ್‌ನ ಅಮೆರಿಕ ವಿರೋಧಿ ನೀತಿಗಳಿಗೆ ಬೆಂಬಲ ಸೂಚಿಸುವ ಯಾವುದೇ ದೇಶಕ್ಕೆ ಹೆಚ್ಚುವರಿ 10% ಸುಂಕ ವಿಧಿಸಲಾಗುವುದು. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಇದು ಎಲ್ಲರ ಗಮನದಲ್ಲಿರಲಿ!” ಎಂದು ಬರೆದುಕೊಂಡಿದ್ದಾರೆ. ಆದರೆ, ಯಾವ ನಿರ್ದಿಷ್ಟ ನೀತಿಗಳನ್ನು ಅವರು “ಅಮೆರಿಕ ವಿರೋಧಿ” ಎಂದು ಪರಿಗಣಿಸುತ್ತಾರೆ ಎಂಬುದನ್ನು ಟ್ರಂಪ್ ವಿವರಿಸಿಲ್ಲ.
ಮತ್ತೊಂದು ಪ್ರತ್ಯೇಕ ಪೋಸ್ಟ್‌ನಲ್ಲಿ, ಅಮೆರಿಕದ ಆಡಳಿತವು ಸೋಮವಾರ ರಾತ್ರಿಯಿಂದಲೇ (ಭಾರತೀಯ ಕಾಲಮಾನ ರಾತ್ರಿ 9:30) ವಿವಿಧ ದೇಶಗಳಿಗೆ ಹೊಸ ಸುಂಕ ನಿಯಮಗಳು ಮತ್ತು ಪರಿಷ್ಕೃತ ವ್ಯಾಪಾರ ಒಪ್ಪಂದದ ನಿಯಮಗಳನ್ನು ವಿವರಿಸುವ ಅಧಿಕೃತ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ ಎಂದೂ ಟ್ರಂಪ್ ಘೋಷಿಸಿದ್ದಾರೆ.
ಮೂಲತಃ 2009 ರಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾವನ್ನು ಒಳಗೊಂಡಿದ್ದ ಬ್ರಿಕ್ಸ್, ನಂತರ ದಕ್ಷಿಣ ಆಫ್ರಿಕಾವನ್ನು ಸೇರಿಸಿಕೊಂಡಿತು. ಕಳೆದ ವರ್ಷ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನು ಸೇರ್ಪಣೆ ಮಾಡಲಾಯಿತು. ಈ ಮೂಲಕ ಬ್ರಿಕ್ಸ್‌ನ ವ್ಯಾಪ್ತಿ ವಿಸ್ತರಿಸಿತು.
ಬ್ರಿಕ್ಸ್ ನಾಯಕರು ತಮ್ಮ “ರಿಯೊ ಡಿ ಜನೈರೊ ಘೋಷಣೆ”ಯಲ್ಲಿ, “ವ್ಯಾಪಾರ-ನಿರ್ಬಂಧಿತ ಕ್ರಮಗಳ ಪ್ರಸಾರ, ಸುಂಕಗಳು ಮತ್ತು ಸುಂಕೇತರ ಕ್ರಮಗಳ ವಿವೇಚನಾರಹಿತ ಏರಿಕೆ ಜಾಗತಿಕ ವ್ಯಾಪಾರವನ್ನು ಮತ್ತಷ್ಟು ಕಡಿಮೆ ಮಾಡಲು, ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಲು ಮತ್ತು ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅನಿಶ್ಚಿತತೆಯನ್ನು ತರಲು ಬೆದರಿಕೆ ಹಾಕುತ್ತದೆ” ಎಂದು ಹೇಳುವ ಮೂಲಕ ವಾಷಿಂಗ್ಟನ್‌ನ ಪ್ರತಿ ಸುಂಕ ನೀತಿಯನ್ನು ಟೀಕಿಸಿದ್ದರು. ಅಲ್ಲದೇ, ಈ ಒಕ್ಕೂಟವು “ನಿಯಮ-ಆಧಾರಿತ, ಮುಕ್ತ, ಪಾರದರ್ಶಕ, ನ್ಯಾಯಯುತ, ಅಂತರ್ಗತ ಮತ್ತು ಸಮಾನ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ”ಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿತ್ತು.
ಭಾರತಕ್ಕೆ ಮುಂದೇನು?
ಭಾರತವು ಪ್ರಸ್ತುತ ಟ್ರಂಪ್ ಆಡಳಿತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಕೊನೆಯ ಹಂತದಲ್ಲಿದೆ. ಸಕಾರಾತ್ಮಕ ಮಾತುಕತೆ ನಡೆಯುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಅಧಿಕಾರಿಗಳ ಪ್ರಕಾರ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಯಾವುದೇ ಹೆಚ್ಚಿನ ಸುತ್ತುಗಳು ಬಾಕಿ ಉಳಿದಿಲ್ಲ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಭಾರತವು ತನ್ನ ಕಾರ್ಮಿಕ-ಕೇಂದ್ರಿತ ಕ್ಷೇತ್ರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ನ್ಯಾಯಯುತ ಒಪ್ಪಂದವನ್ನು ಪ್ರಸ್ತಾಪಿಸಿದೆ. ಆದರೆ, ಅಕ್ಕಿ, ಡೈರಿ, ಗೋಧಿ ಮತ್ತು ಇತರ ತಳೀಯವಾಗಿ ಮಾರ್ಪಡಿಸಿದ ಬೆಳೆಗಳಂತಹ ದೇಶೀಯ ಹಿತಾಸಕ್ತಿಗಳಿಗೆ ನಿರ್ಣಾಯಕ ಕ್ಷೇತ್ರಗಳಲ್ಲಿ ರಿಯಾಯಿತಿಗಳನ್ನು ನೀಡಲು ಭಾರತ ದೃಢವಾಗಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಉಕ್ಕು, ಆಟೋಮೊಬೈಲ್ಸ್ ಮತ್ತು ಅಲ್ಯುಮಿನಿಯಂ ಸೇರಿದಂತೆ ವಿವಿಧ ಕ್ಷೇತ್ರಗಳ ಸುಂಕಗಳು ಸೇರಿಕೊಳ್ಳುವ ಸಾಧ್ಯತೆ ಕಡಿಮೆ.
ಜುಲೈ 9 ರಂದು ಡೊನಾಲ್ಡ್ ಟ್ರಂಪ್ ಘೋಷಿಸಿದ ಹೆಚ್ಚುವರಿ ಸುಂಕಗಳಿಗೆ ಸಂಬಂಧಿಸಿದ 90 ದಿನಗಳ ಗಡುವು ಕೊನೆಗೊಳ್ಳಲಿದೆ. ತದನಂತರ ಭಾರತ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಹೆಚ್ಚುವರಿ ಶೇ.26ರಷ್ಟು ಪ್ರತಿಸುಂಕ ಅನ್ವಯವಾಗುತ್ತದೆ. ಟ್ರಂಪ್‌ನ ಈ ಹೊಸ ಎಚ್ಚರಿಕೆ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.