ವಾಷಿಂಗ್ಟನ್: ಜಾಗತಿಕ ವ್ಯಾಪಾರವನ್ನು ಅಮೆರಿಕದ ಉದ್ಯಮಗಳಿಗೆ ಅನುಕೂಲಕರವಾಗಿ ರೂಪಿಸುವ ಪ್ರಯತ್ನದ ಭಾಗವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಹಲವು ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶದ ಅನ್ವಯ, 69 ದೇಶಗಳಿಗೆ ಶೇ,10 ರಿಂದ 41ವರೆಗಿನ ಹೆಚ್ಚಿನ ಆಮದು ಸುಂಕ ದರಗಳು 7 ದಿನಗಳಲ್ಲಿ ಜಾರಿಗೆ ಬರಲಿವೆ.
ಈ ಆದೇಶದನ್ವಯ, ಸಿರಿಯಾ ಮೇಲೆ ಅತ್ಯಧಿಕ ಅಂದರೆ ಶೇ.41 ಸುಂಕವನ್ನು ವಿಧಿಸಲಾಗಿದೆ. ಇದಲ್ಲದೆ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನಂತಹ ಪ್ರಮುಖ ಪಾಲುದಾರರೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ಆಧರಿಸಿ ವಿವಿಧ ದರಗಳನ್ನು ನಿಗದಿಪಡಿಸಲಾಗಿದೆ.
ಸಿರಿಯಾ ಮೇಲೆ ಶೇ.41, ಕೆನಡಾದಿಂದ ಬರುವ ಅನೇಕ ಸರಕುಗಳ ಮೇಲೆ ಶೇ.35, ಬ್ರೆಜಿಲ್ ಮೇಲೆ ಶೇ.50, ಭಾರತದ ಮೇಲೆ ಶೇ.25, ತೈವಾನ್ ಮೇಲೆ ಶೇ.20 ಮತ್ತು ಸ್ವಿಟ್ಜರ್ಲೆಂಡ್ ಮೇಲೆ ಶೇ.39 ವರೆಗೆ ಸುಂಕಗಳನ್ನು ವಿಧಿಸಲಾಗಿದೆ. ಇದೇ ವೇಳೆ, ಪಾಕಿಸ್ತಾನದ ಆಮದಿನ ಮೇಲಿನ ಸುಂಕವನ್ನು ಶೇ.29 ರಿಂದ ಶೇ.19 ಕ್ಕೆ ಇಳಿಸಲಾಗಿದೆ.
ಶ್ವೇತಭವನದ ಪ್ರತ್ಯೇಕ ಪ್ರಕಟಣೆಯ ಪ್ರಕಾರ, ಕೆನಡಾದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಈಗಿರುವ ಶೇ.25 ರಿಂದ ಶೇ.35 ಕ್ಕೆ ಹೆಚ್ಚಿಸಲಾಗುವುದು. ಮೆಕ್ಸಿಕೋ ಮೇಲಿನ ಶೇ.25 ಸುಂಕವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಉತ್ತರ ಅಮೆರಿಕದ ವ್ಯಾಪಾರ ಒಪ್ಪಂದದ ಅಡಿಯಲ್ಲಿ ದೇಶವನ್ನು ಪ್ರವೇಶಿಸುವ ಕೆನಡಾ ಮತ್ತು ಮೆಕ್ಸಿಕೋದ ಸರಕುಗಳಿಗೆ ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಹೊಸ ಸುಂಕದ ಪಟ್ಟಿ
ಹೊಸ ಆದೇಶದಲ್ಲಿ, ಪಟ್ಟಿಯಲ್ಲಿಲ್ಲದ ಇತರ ಎಲ್ಲಾ ದೇಶಗಳ ಸರಕುಗಳ ಮೇಲೆ ಶೇ.10 ಸುಂಕವನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಕೆಲವು ಪ್ರಮುಖ ದೇಶಗಳು ಮತ್ತು ಅವುಗಳ ಮೇಲೆ ವಿಧಿಸಲಾದ ಹೊಸ ಸುಂಕ ದರಗಳು ಹೀಗಿವೆ:
ಭಾರತ: 25%
ಬ್ರೆಜಿಲ್: 10%
ಯುಕೆ: 10%
ಸ್ವಿಟ್ಜರ್ಲೆಂಡ್: 39%
ದಕ್ಷಿಣ ಕೊರಿಯಾ: 15%
ಪಾಕಿಸ್ತಾನ: 19%
ವಿಯೆಟ್ನಾಂ: 20%
ದಕ್ಷಿಣ ಆಫ್ರಿಕಾ: 30%
ಟರ್ಕಿ: 15%
ಇಂಡೋನೇಷ್ಯಾ: 19%
ಮಲೇಷ್ಯಾ: 19%



















