ವಾಷಿಂಗ್ಟನ್: ಇಸ್ರೇಲ್‌ಗೆ 2000 ಪೌಂಡ್ ಬಾಂಬ್‌ಗಳನ್ನು ಪೂರೈಸುವುದಕ್ಕೆ ನಿರ್ಬಂಧ ಹೇರಿದ್ದ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಆದೇಶವನ್ನು ವಜಾ ಮಾಡಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಕೂಡಲೇ ನಿರ್ಬಂಧ ತೆರವುಗೊಳಿಸಿ ಬಾಂಬ್ ಗಳನ್ನು ರವಾನಿಸಿ ಎಂದು ಸೇನೆಗೆ ನಿರ್ದೇಶನ ನೀಡಿದ್ದಾರೆ.
ಪ್ಯಾಲೆಸ್ತೀನ್ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್‌ಗೆ ಈ ಬಾಂಬ್‌ಗಳನ್ನು ಪೂರೈಸಿದರೆ, ಇಸ್ರೇಲ್ ಅವುಗಳನ್ನು ಗಾಜಾದಲ್ಲಿರುವ ನಾಗರಿಕರ ಮೇಲೆ ಹಾಕಿ, ಸಾವು ನೋವಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಬೈಡೆನ್ ಅವರು ಅವುಗಳ ಪೂರೈಕೆಗೆ ನಿರ್ಬಂಧ ಹೇರಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಈಗ ಈ ನಿರ್ಬಂಧ ತೆರವುಗೊಳಿಸಿರುವ ಟ್ರಂಪ್, “ಇಸ್ರೇಲ್ ಸಾಕಷ್ಟು ಶಸ್ತ್ರಾಸ್ತ್ರ, ಬಾಂಬ್‌ಗಳಿಗೆ ಆರ್ಡರ್ ಕೊಟ್ಟಿತ್ತು ಮತ್ತು ಅದಕ್ಕೆ ಹಣವನ್ನೂ ಪಾವತಿಸಿತ್ತು. ಆದರೆ, ಅವುಗಳನ್ನು ಬೈಡೆನ್ ಕಳುಹಿಸಿಕೊಟ್ಟಿರಲಿಲ್ಲ. ಈಗ ನಿರ್ಬಂಧ ತೆರವುಗೊಳಿಸಿದ್ದೇನೆ. ಅವುಗಳೆಲ್ಲ ಈಗ ಇಸ್ರೇಲ್ ಕಡೆಗೆ ಹೋಗುತ್ತಿವೆ” ಎಂದು ಟ್ರಂಪ್ ತಮ್ಮ ಟ್ರುಥ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಟ್ರಂಪ್ ಹಾಗೂ ಬೈಡೆನ್ ಇಬ್ಬರೂ ಅಮೆರಿಕದ ಮಿತ್ರರಾಷ್ಟ್ರವಾದ ಇಸ್ರೇಲ್‌ನ ಪ್ರಖರ ಬೆಂಬಲಿಗರೇ ಆಗಿದ್ದಾರೆ. ಆದರೆ, ಹಮಾಸ್ ಉಗ್ರರ ವಿರುದ್ಧದ ಹೋರಾಟದ ಹೆಸರಲ್ಲಿ ಗಾಜಾದ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯಿಂದ ಮಾನವೀಯ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ನಿಲುವಿಗೆ ಕಟು ಟೀಕೆ ವ್ಯಕ್ತವಾಗಿತ್ತು. ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೈಡೆನ್ ಅವರು ಇಸ್ರೇಲ್‌ಗೆ ಬಾಂಬ್‌ಗಳನ್ನು ಪೂರೈಸದೇ ಹಾಗೇ ಉಳಿಸಿಕೊಂಡಿದ್ದರು.
ಈಗ ಒಂದು ವಾರದ ಹಿಂದೆ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ನಡೆದಿದೆ. ಎರಡೂ ಕಡೆಯವರು ತಮ್ಮ ಬಳಿಯಿದ್ದ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಜನವರಿ 20ರ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೂ ಮುಂಚೆಯೇ ಟ್ರಂಪ್ ಅವರು, ಹಮಾಸ್ ಉಗ್ರರು ಗಾಜಾದಲ್ಲಿ ಒತ್ತೆಯಲ್ಲಿಟ್ಟಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡದೇ ಹೋದಲ್ಲಿ ನರಕ ತೋರಿಸುತ್ತೇನೆ ಎಂಬ ಬೆದರಿಕೆಯೊಡ್ಡಿದ್ದರು. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದ ಏರ್ಪಟ್ಟು, ಕದನ ವಿರಾಮ ಜಾರಿಯಾಗಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್‌ಗೆ ನುಗ್ಗಿದ್ದ ಹಮಾಸ್ ಉಗ್ರರು 250 ಮಂದಿಯನ್ನು ಹೊತ್ತೊಯ್ದು ಒತ್ತೆಯಲ್ಲಿಟ್ಟುಕೊಂಡಿದ್ದರು. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಈ ದಾಳಿಯಲ್ಲಿ ಸುಮಾರು 1200 ಮಂದಿ ಮೃತಪಟ್ಟಿದ್ದರು. ಹಮಾಸ್ ಉಗ್ರರ ಈ ನಡೆಯು ದಶಕಗಳ ಹಿಂದಿನ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳುವಂತೆ ಮಾಡಿ ರಕ್ತಪಾತಕ್ಕೆ ದಾರಿ ಮಾಡಿಕೊಟ್ಟಿತು. ನಂತರದಲ್ಲಿ ಗಾಜಾ ಮೇಲೆ ಇಸ್ರೇಲ್ ನಡೆಸಿದ ಯುದ್ಧವು 47 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಪಡೆಯಿತು.