ವಾಷಿಂಗ್ಟನ್: ವಲಸೆ ನೀತಿ, ದಾಖಲೆಯಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಗಡೀಪಾರು ಮಾಡುವುದು ಸೇರಿ ಹಲವು ಆಕ್ರಮಣಕಾರಿ ನೀತಿ ಅನುಸರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಭಾರತೀಯರಿಗೆ ಅನುಕೂಲವಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಗೋಲ್ಡ್ ಕಾರ್ಡ್ ಸಿಟಿಜನ್ ಶಿಪ್ ಯೋಜನೆಯನ್ನು ಟ್ರಂಪ್ ಘೋಷಣೆ ಮಾಡಿದ್ದು, ಇದರಿಂದ ಭಾರತದ ವಿದ್ಯಾರ್ಥಿಗಳು, ಪದವೀಧರರು, ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಅಮೆರಿಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ಪೌರತ್ವ ಯೋಜನೆ ಜತೆಗೆ ಗೋಲ್ಡ್ ಕಾರ್ಡ್ ಪೌರತ್ವ ಯೋಜನೆಯನ್ನೂ ಡೊನಾಲ್ಡ್ ಟ್ರಂಪ್ ಆರಂಭಿಸಿದ್ದಾರೆ. ಅಂದರೆ, ಅಮೆರಿಕದಲ್ಲಿ 43 ಕೋಟಿ ರೂಪಾಯಿ ಹೂಡಿಕೆ ಮಾಡುವವರಿಗೆ ಗೋಲ್ಡ್ ಕಾರ್ಡ್ ಪೌರತ್ವ ಸಿಗುತ್ತದೆ. ಇದರಿಂದ ಬೇರೆ ದೇಶದವರು ಅಮೆರಿಕದಲ್ಲಿ ಕಂಪನಿ ಆರಂಭಿಸುವ ಜತೆಗೆ ಆ ದೇಶದ ಜನರಿಗೆ ಉದ್ಯೋಗ ನೀಡಬಹುದಾಗಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.
ಅಮೆರಿಕದಲ್ಲಿ 43 ಕೋಟಿ ರೂ. ಹೂಡಿಕೆ ಮೂಲಕ ಕಂಪನಿ ಆರಂಭಿಸಿದರೆ, ಆ ಕಂಪನಿಯು 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. “ಅಮೆರಿಕದಲ್ಲಿ ಪದವಿ ಪಡೆಯುವವರು ಇಲ್ಲಿಯೇ ಉದ್ಯೋಗ ಮಾಡಬಹುದಾಗಿದೆ. ಹಾಗೆಯೇ, ಗೋಲ್ಡ್ ಕಾರ್ಡ್ ಅನ್ವಯ ಪೌರತ್ವ ಪಡೆದವರು ಇಲ್ಲಿಯೇ ನೆಲೆಸಿ, ಬೇರೆಯವರಿಗೆ ಉದ್ಯೋಗ ಕೊಡಬಹುದಾಗಿದೆ. ಯೋಜನೆಯು ಭಾರಿ ಯಶಸ್ವಿಯಾಗಲಿದೆ” ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಲೇ ಆಕ್ರಮಣಕಾರಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ, ದಾಖಲೆ ಇಲ್ಲದೆ ನೆಲೆಸಿರುವವರ ಗಡೀಪಾರು, ಹುಟ್ಟಿನಿಂದಲೇ ಲಭಿಸುವ ಪೌರತ್ವ ಹಕ್ಕು ರದ್ದು ಸೇರಿ ಹಲವು ನಿರ್ಧಾರ ಘೋಷಿಸಿದ್ದಾರೆ. ಇದರಿಂದಾಗಿ ಸಾವಿರಾರು ಭಾರತೀಯರು ಈಗ ಗಡೀಪಾರಿನ ಶಿಕ್ಷೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಭಾರತೀಯರಿಗೆ ಉದ್ಯೋಗ ಸಿಗುವ ದಿಸೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.