ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ, ಬಲಪಂಥೀಯ ಕಾರ್ಯಕರ್ತ ಮತ್ತು ನಿರೂಪಕ ಚಾರ್ಲಿ ಕರ್ಕ್ ಅವರನ್ನು ಬುಧವಾರ (ಸ್ಥಳೀಯ ಕಾಲಮಾನ) ಉತಾಹ್‌ನ ಒರೆಮ್‌ನಲ್ಲಿರುವ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆಯು ಅಮೆರಿಕವನ್ನು ಬೆಚ್ಚಿ ಬೀಳಿಸಿದೆ.
ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಹತ್ಯೆಯ ಕ್ಷಣ ಸೆರೆಯಾಗಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕರ್ಕ್ ಅವರು ವಿಶ್ವವಿದ್ಯಾಲಯದಲ್ಲಿ ಬೃಹತ್ ಹೊರಾಂಗಣ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಈ ಕುಕೃತ್ಯ ನಡೆದಿದೆ. ಆಗ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಬಂದಿದೆ. ‘ದಿ ಅಮೆರಿಕನ್ ಕಮ್‌ಬ್ಯಾಕ್’ ಮತ್ತು ‘ಪ್ರೂವ್ ಮಿ ರಾಂಗ್’ ಎಂಬ ಘೋಷಣೆಗಳಿದ್ದ ಬಿಳಿ ಟೆಂಟ್‌ನ ಕೆಳಗೆ ಕುಳಿತು ಕೈಯಲ್ಲಿ ಮೈಕ್ರೊಫೋನ್ ಹಿಡಿದು 31 ವರ್ಷದ ಕರ್ಕ್ ಮಾತನಾಡುತ್ತಿದ್ದರು. ಗುಂಡು ಹಾರಿದೊಡನೆ, ಅವರ ಕುತ್ತಿಗೆಯ ಎಡಭಾಗದಿಂದ ರಕ್ತ ಚಿಮ್ಮುತ್ತದೆ. ಆಗ ಅವರು ತಮ್ಮ ಬಲಗೈಯನ್ನು ಕುತ್ತಿಗೆಗೆ ಹಿಡಿದುಕೊಳ್ಳುವುದು ದೃಶ್ಯದಲ್ಲಿದೆ. ದಿಗ್ಭ್ರಮೆಗೊಂಡ ಪ್ರೇಕ್ಷಕರು ಕಿರುಚಾಡಲು ಮತ್ತು ಓಡಿಹೋಗಲು ಪ್ರಾರಂಭಿಸುತ್ತಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಗುಂಡಿನ ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲಷ್ಟೇ, ‘ಟರ್ನಿಂಗ್ ಪಾಯಿಂಟ್ ಯುಎಸ್‌ಎ’ ಎಂಬ ಸಂಪ್ರದಾಯವಾದಿ ಯುವ ಸಂಘಟನೆಯ ಸಹ-ಸಂಸ್ಥಾಪಕರಾದ ಕರ್ಕ್, ಬಂದೂಕು ಹಿಂಸಾಚಾರವನ್ನು ಮಾಡುವವರು ಯಾರು ಎಂಬ ವಿಷಯದ ಬಗ್ಗೆ ಪ್ರಶ್ನಿಸಿದವರೊಂದಿಗೆ ವಾಗ್ವಾದಕ್ಕಿಳಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕರ್ಕ್ ಅವರ ‘ಪ್ರೂವ್ ಮಿ ರಾಂಗ್’ ಕಾರ್ಯಕ್ರಮದ ಹೊರಾಂಗಣ ಟೆಂಟ್ ಬಳಿ ನಾನು ನಿಂತಿದ್ದೆ. ಅಲ್ಲಿ ಅವರು ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಿಗೆ ಸವಾಲು ಹಾಕುವಂತೆ ಆಹ್ವಾನಿಸಿದ್ದರು. ವಿಪರ್ಯಾಸವೆಂದರೆ, ಗುಂಡು ತಗುಲುವ ಮೊದಲು ಕರ್ಕ್ ಬಂದೂಕು ನಿಯಂತ್ರಣದ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಡಿಚೆನ್ ಹೇಳಿದ್ದಾರೆ. “ಕರ್ಕ್ ಇದ್ದಕ್ಕಿದ್ದಂತೆ ಕುತ್ತಿಗೆಯನ್ನು ಹಿಡಿದುಕೊಂಡರು. ಎಲ್ಲೆಡೆ ರಕ್ತ ಹರಿಯುತ್ತಿತ್ತು. ಗುಂಡಿನ ಸದ್ದು ನನ್ನ ಹಿಂದಿನಿಂದ, ಬೆಟ್ಟದ ಮೇಲಿನಿಂದ ಬಂದಂತೆನಿಸಿತು. ಒಂದೇ ಒಂದು ಸದ್ದು ಕೇಳಿಸಿತು, ನಾವೆಲ್ಲರೂ ನೆಲಕ್ಕೆ ಬಿದ್ದೆವು. ನಂತರ ಎಲ್ಲರನ್ನೂ ಓಡಿಹೋಗಲು ಹೇಳಿದರು. ಹಾಗಾಗಿ ನಾವೆಲ್ಲರೂ ಓಡಿ ಹೋದೆವು,” ಎಂದು ಅವರು ವಿವರಿಸಿದ್ದಾರೆ.
ಭದ್ರತಾ ಲೋಪ?
ಉತಾಹ್ ಕಾಲೇಜಿನಲ್ಲಿ ಕರ್ಕ್ ಅವರ ಕಾರ್ಯಕ್ರಮವು ಟಿಪಿಯುಎಸ್‌ಎಯ ‘ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್’ ನ ಭಾಗವಾಗಿತ್ತು. ಈ ಕಾರ್ಯಕ್ರಮವನ್ನು ಕ್ಯಾಂಪಸ್‌ನ ಹೊರಾಂಗಣದ ಅಂಗಳದಲ್ಲಿ ನಡೆಸಲಾಗುತ್ತಿತ್ತು ಎಂದು ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆ ಹೇಳಿದೆ. ಕಾರ್ಯಕ್ರಮದಲ್ಲಿ ಯಾವುದೇ ಪ್ರಮುಖ ಭದ್ರತಾ ಕ್ರಮಗಳಾಗಲಿ ಅಥವಾ ಮೆಟಲ್ ಡಿಟೆಕ್ಟರ್‌ಗಳಾಗಲಿ ಇರಲಿಲ್ಲ ಎಂದು ಡಿಚೆನ್ ಮತ್ತು ಇತರ ಸಾಕ್ಷಿಗಳು ಹೇಳಿದ್ದಾರೆ.
ಸುಮಾರು 3,000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಪೊಲೀಸ್ ಇಲಾಖೆಯ ಆರು ಅಧಿಕಾರಿಗಳು ಮತ್ತು ಕರ್ಕ್ ಅವರ ಸ್ವಂತ ಭದ್ರತಾ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದರು ಎಂದು ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆ ಹೇಳಿದೆ.
ಟ್ರಂಪ್ ಸಂತಾಪ
ಗುಂಡು ತಗುಲಿದ ಕೂಡಲೇ ಕರ್ಕ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ನಂತರದಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು. “ಅಮೆರಿಕದ ಯುವಕರ ಹೃದಯವನ್ನು ಚಾರ್ಲಿಗಿಂತ ಚೆನ್ನಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಅವರನ್ನು ಎಲ್ಲರೂ, ವಿಶೇಷವಾಗಿ ನಾನು, ಬಹಳ ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ. ಈಗ, ಅವರು ನಮ್ಮೊಂದಿಗೆ ಇಲ್ಲ,” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಂಕಿತನಿಗಾಗಿ ಶೋಧ
ಕರ್ಕ್ ಅವರ ಹತ್ಯೆಯನ್ನು “ಉದ್ದೇಶಿತ ದಾಳಿ” ಎಂದು ಉತಾಹ್‌ನ ಸಾರ್ವಜನಿಕ ಸುರಕ್ಷತಾ ಇಲಾಖೆ ಬಣ್ಣಿಸಿದೆ. ಆದರೆ, ಅಧಿಕಾರಿಗಳು ಇನ್ನೂ ಶಂಕಿತನನ್ನು ಬಂಧಿಸಿಲ್ಲ. “ಶೂಟರ್ ಒಂದು ಕಟ್ಟಡದ ಮೇಲ್ಛಾವಣಿಯಿಂದ ಸಾರ್ವಜನಿಕ ಕಾರ್ಯಕ್ರಮದ ಸ್ಥಳಕ್ಕೆ ಗುಂಡು ಹಾರಿಸಿರಬಹುದು ಎಂದು ಶಂಕಿಸಲಾಗಿದೆ,” ಎಂದು ಇಲಾಖೆ ಹೇಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಅವರಿಬ್ಬರಿಗೂ ಗುಂಡಿನ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.